ಅರೆ ನಿದ್ರೆ ಅರೆ ಎಚ್ಚರ
ನೇರಳೆ ಹಣ್ಣು ತಿಂದ ಕನಸು
ಧಡ್ ಎಂದು ಕಂಬಿಗೆ ತಲೆ ತಾಗಿದರೆ
ಗೊತ್ತಿಲ್ಲದೂರಲ್ಲಿ ಪಲಾಯನವಾದಿ ಪ್ರೈವೇಟ್ ಬಸ್ಸು.
ಬೀದಿ ಬದಿ ಮನೆಯಲ್ಲಿ
ಮಗು ಅಳುತ್ತಲೇ ಇರಬೇಕಂತಿಲ್ಲ.
ನದಿಗುಂಟ ನಡೆವಾಗ
ಕೆಂಪುಕಲ್ಲುಗಳನ್ನೇ ಏಕೆ ಆಯುತ್ತೀಯ?
ಹತ್ತಿ ಇಳಿದು ಸುತ್ತಿ ನುಲಿದು
ಸಾಗುವಾಗ ಎಡಕ್ಕೊಮ್ಮೆ ನೋಡು
ದಾರಿ ಇನ್ನೂ ಅಲ್ಲೇ ಸುತ್ತುತ್ತಿದೆ.
ದೂರದಲ್ಲಿ, ಮೈಲು ದೂರದಲ್ಲಿ
ನಡೆಯುತ್ತಿರುವುದು ನೀನೆ!
ಇಕೋ, ಈ ತಿರುವು ತಿರುಗುತ್ತಲೇ
ಮುಗಿಯುತ್ತೆ ಹಾಡ್ಯ
ನಿರೀಕ್ಷಿತ ಅಪಘಾತದಂತೆ ಸಿಕ್ಕುತ್ತೆ
ನಿಮ್ಮಜ್ಜನ ಊರಿನ ಏಕಾಕಿ ಬಸ್ ಸ್ಟಾಪು.
ಪೆಟ್ಟಿಗೆ ಅಂಗಡಿಯಲ್ಲಿ ಮೂವತ್ತರ ಕನ್ಯೆ
ಸಾಲು ಬಾಟಲಿಗಳಲ್ಲಿ ಮೂರೇ ತಿಂಗಳು ಹಳೆಯ
ಶೇಂಗಾ ಹುರಿಗಡ್ಲೆ ಚಕ್ಕುಲಿ ಕೋಡುಬಳೆ.
ಮನೆ ತುಂಬಾ ಮಕ್ಕಳು ಮತ್ತು
ಕಂ ಎನ್ನುವ ಹಳೇ ಸುಧಾ ತರಂಗ ಕರ್ಮವೀರ
ಅಗಲ ಕಣ್ಣು ಚಿಕ್ಕಿಯ ಅಭಿಜ್ಞಾನ ಶಾಕುಂತಲ.
ಅಟ್ಟದ ಮೇಲಿನ ಟ್ರಂಕು ತುಂಬಾ
ಅಮ್ಮ ಆಡಿ ಬಿಟ್ಟ ಮಣಿ ಗೊಂಬೆ.
ಎಂದೂ ನೋಡಿರದ ಅಜ್ಜನ ಹಾರ್ಮೋನಿಯಮ್ಮು
ಮಾಸಿದ ಯಕ್ಷಗಾನದ ಕಿರೀಟ.
ಸಿಗ್ನಲ್ಲುಗಳಿಲ್ಲದ ಈ ಊರಲ್ಲಿ
ಯರ್ರಾಬಿರ್ರಿ ನುಗ್ಗುತ್ತದೆ ಮನಸ್ಸು.
ಮನಸೂ ಒಂದು ಪ್ರೈವೇಟ್ ಬಸ್ಸು.
Nice one…….i really felt that i am in my grand ma’s home……….did you feel the same, while writing this?
ಹೌದು. ಮನಸ್ಸು ಎನ್ನೋದು ಪ್ರೈವಟ್ ಬಸ್ ಎಲ್ಲಿ ಬೇಕಾದರೂ ಹೇಗೆ ಬೇಕಾದರೂ, ಗೇಟಿದ್ದರೂ ನುಗ್ಗುತ್ತದೆ, ಜ೦ಪ್ ಹೊಡೆಯುತ್ತದೆ. ಹಕ್ಕಿಯ೦ತೆಯೂ ಹಾರುತ್ತದೆ. ಒಳ್ಳೆಯ ಕವನ
laaykittu
ಹತ್ತಿ ಇಳಿದು ಸುತ್ತಿ ಸಾಗುತ್ತಾ
ಕಾಣದ ಕನವರಿಕೆಯ ಅರಸುತ್ತದೆ ಹೆಡ್ ಲ್ಯಾoಪು ಡಿಂ-ಡಿಪ್ಪು ಮಾಡುತ್ತಾ
ಮತ್ತೊಂದು ಬದಿ ಈಗ ಕಾಣುತ್ತ
ಎಂದು ಮನಸೆಂಬ ಪ್ರೈವೇಟ್ ಬಸ್ಸು …
ನಿಮ್ಮ ಕವನ ಆಪ್ತವಾಗಿದೆ.
Thanks all
@sari: of course
ತುಂಬಾ ಚೆನ್ನಾಗಿದೆ,
ಬಸ್ ಹೋಗಿ ಮೆಟ್ರೋ ರೈಲು ಬಂತು ನೋಡಿ..
ಆದರೂ ಮನಸಿನ ಏಳುಬೀಳಿನ ಓಟ ನಿಮ್ಮ ಕವನದಂತೆ ಎಂದಿಗೂ ಪ್ರೈವೇಟ್ ಬಸ್ಸೇ ಸರಿ.
[...] ದಿಕ್ಕಿಲ್ಲ, ಮನಸ್ಸೆ೦ಬುದು ಪ್ರೈವೇಟ್ ಬಸ್. ನಮ್ಮ ಮನಸ್ಸಿಗೆ ಲಗಾಮು ಹಾಕುವುದು, [...]