ಕುದುರೆಮುಖದ ದಾರಿಗಳಲ್ಲಿ ದೃಷ್ಟಿಯುದ್ದಕ್ಕೂ ಕವಿದ ಮಂಜು ಮತ್ತದರೊಳಗಿಂದ ಅನೇಕ ತಿರುವುಗಳು. ದಾರಿ ತೋರುವೆಯಾ ನನಗೆ, ಹೊತ್ತು ನಡೆಯುತ್ತೇನೆ ನಿನ್ನ? ಕುದುರೆಮುಖದ ದಾರಿಗಳಲ್ಲಿ ಸುರಿಯುತ್ತಲೇ ಇರುತ್ತದೆ ಧೋ ಧೋ ಮಳೆ ಅಥವಾ ಕಟಕಟಿಸುವ ಚಳಿ. ಜೋಗುಳ ಹಾಡುವೆಯ ನನಗೆ, ಹೊದಿಸಿ ಮಲಗಿಸುತ್ತೇನೆ ನಿನ್ನ? ಕುದುರೆಮುಖದ ದಾರಿಗಳಲ್ಲಿ ಸಿಕ್ಕುತ್ತಾರೆ ಅನೇಕಾನೇಕ ಚಿಣ್ಣರು. ಅವರಲ್ಲಿ ನನ್ನದು ನಿನ್ನದು ಮುಸುಕು ಮುಸುಕು ಬಿಂಬಗಳು. ಒಮ್ಮೆ ನಿಜಕ್ಕೂ ನಾನಾಗುತ್ತೇನೆ ನಾನು ಇರುವೆಯಾ ಜೊತೆಗೆ ಮತ್ತದೇ ನೀನು? ಕುದುರೆಮುಖದ ದಾರಿಗಳಲ್ಲಿ ಮೈಲಿಗೊಂದರಂತೆ ತೊರೆಗಳು. ಅದರಲ್ಲಿ ಕಾಲಾಂತರದ [...]