ಮದ್ಯದಲ್ಲೊಂದು ಲೈನು – ೧

Posted: ಫೆಬ್ರವರಿ 24, 2012 by sukhesh in ನನ್ನ ಕತೆಗಳು

ಹೂವು ಬಾಗೋದು ತಂಗಾಳಿಯ
ಹಾಡಿಗೆ ಅಂತ ನಿನ್ನ ಭಾವನೆ
ಲತೆಗೆ ಬೆನ್ನು ನೋವು
ಅಂತ ನನ್ನ ಗುಮಾನಿ

ರಮ್ಮಿ ಆಗಲೇ ನಾಲ್ಕು ರೌಂಡು ಆಗಿತ್ತು ಅವ ಬರುವಾಗ. ನಾ ಎರಡು ಆಟ ಇಟ್ಟೂ ಆಗಿತ್ತು. ನಿಮ್ಮಿ ಕೌಂಟು ಆಗ್ಲೇ ೧೪೦ರ ಆಸುಪಾಸಲ್ಲಿತ್ತು. ಆಗಲೇ ಅವ ಬಂದ. ಬಾಗಿಲು ತಟ್ಟಿ “ಬರ ಬಹುದಾ” ಅಂತ ಕೇಳೋದನ್ನ ಯಾರೂ ಅವನಿಗೆ ಕಳಿಸಿಯೇ ಇಲ್ಲವೇನೋ ಅನ್ನೋ ತರ ಸೀದಾ ನುಗ್ಗೋದೆ ಅವನ ಸ್ಟೈಲು. “ಹುಡ್ಗೀರ ರೂಮು ಕಣೋ. ಬರೋ ಮುಂಚೆ permission ತಗೋಬೇಕು” ಅಂದ್ರೆ ಅವನ ಕಿವಿಗೆ ಇಂತವೆಲ್ಲ ಕೇಳೋದೇ ಇಲ್ಲ ಅನ್ನೋ ತರ ಚಾಪೆ ಮೇಲೆ ಕೂತ. “ನಂಗೂ ಎಲೆ ಹಾಕ್ರೋ” ಅಂತ ಆರ್ಡರು ಮಾಡಿದ. ಎಲೆ ಹಾಕಿದ ಮೇಲೆ “ಟೀ ಬರಲೇ ಇಲ್ಲ ಅಂತ” ಕಾರ್ಡು ಜೋಡಿಸುವಾಗ ಅಂದೇ ಅಂತಾನೆ. ಅದರಲ್ಲೇನು ಅನುಮಾನ ಬೇಡ.

“already ಎಲ್ರುದ್ದೂ ನಾಲ್ಕು ರೌಂಡು ಆಟ ಆಗಿದೆ. ಮುಗೀಲಿ ತಡ್ಕೋ” ಅಂದ ರಚ್ಚು. ಅವ್ನು ಹೀಗೇನೆ ಯಾವಾಗಲೂ ರೂಲ್ಸು ರೂಲ್ಸೆ. ಪಕ್ಕಾ ಲಾಯರೀ ಬುದ್ದಿ. ಆದ್ರೆ ಇವ ಸೈತಾನನ ಜೊತೆಗೂ ವಾದ ಮಾಡಿ ಗೆದ್ದು ಬಂಡವ ತಾನೇ! ಸುಮ್ನಿರ್ತಾನ? “ಸರೀನಪ್ಪ. ನಂದು ನಾಲ್ಕು ರೌಂಡ್ ಸೇರ್ಸಿ ೧೬೦ ಬರಕೋ. ಯಾರು ಬೇಡ ಅಂತಾರೆ” ಅಂದ. ಇನ್ನು ಮಾತೆ ಇಲ್ಲ. ಸೈತಾನಂಗೆ ೧೬೦ ಬರೆದ್ರೇನು ೧೯೯ ಬರೆದ್ರೇನು. ಅದನ್ನ ಲೆಕ್ಕಕ್ಕೆ ತಗೊಳೋವ್ನೆ ಅಲ್ಲ ಅವ. ಹಾಗಂತ ಗೆಲ್ತಾನೆ ಅಂತಲ್ಲ. ಗೆಲ್ಲೋದು ಸೋಲೋದು ಅವನಿಗೆ ಸಂಬಂಧ ಪಟ್ಟಿದೇ ಅಲ್ಲ ಅನ್ನೋ ತರ ಆದೊವ್ನು ಅವ್ನು. ಈಗ ಒಂದು example ಕೊಡ್ಬೇಕು ಅಂದ್ರೆ ನೋಡಿ ಅವ್ನು ಯಾವತ್ತೂ ಎಷ್ಟೇ ಕೆಟ್ಟದಾಗಿ ಕಾರ್ಡುಗಳು ಬಿದ್ರೂನು ಆಟ ಡ್ರಾಪ್ ಮಾಡೋಲ್ಲ. “ಆಟಕ್ಕೆ ಅಂತ ಕೂತ ಮೇಲೆ ಜೋಕರ್ ನೋಡಬಾರದು. ಯುದ್ದಕ್ಕೆ ಅಂತ ನಿಂತ ಮೇಲೆ ಸೈನಿಕರನ್ನ ಲೆಕ್ಕ ಹಾಕಬಾರದು”, “ನಾ ಒಂದು ಸಲ ಆಟಕ್ಕೆ ಕೂತಮೇಲೆ ಡ್ರಾಪ್ ಮಾಡು ಅಂತ ನಾನೇ ಹೇಳಿದ್ರೂ ಕೇಳೋಲ್ಲ” ಇತ್ಯಾದಿ ಇತ್ಯಾದಿ ಫಿಲ್ಮಿ ಡೈಲಾಗ್ ಎಸೆಯುತ್ತ ಆಡ್ತಾನೆ. ಆದ್ರೆ ಅವನದು ಬುಕ್ ಆಗೋದು ಕಡಿಮೆ. ಹೆಂಗೋ ಏನೋ ಮಾಡಿ ಕೌಂಟನ್ನ ಹತ್ತು ಹದಿನೈದರಲ್ಲೇ ಇಟ್ಟು ಆಡ್ತಾನೆ. ಅವಾಗವಾಗ ನೆಲದಲ್ಲಿರೋ ಕಾರ್ಡುಗಳನ್ನ ಎಲ್ಕೊತಾನೆ ಎಂತ ಗುಲ್ಲು ಇದೆ. ಆದ್ರೆ ಯಾರ ಕೈಲೂ ರೆಡ್ ಹ್ಯಾಂಡ್ ಆಗಿ ಹಿಡಿಯೋಕೆ ಆಗಿಲ್ಲ ಇಷ್ಟು ವರ್ಷದಲ್ಲೂ.

ಅಂದುಕೊಂಡ ಹಾಗೆ ಆಯಿತು. ಮೊದಲ ಆಟ ಅವನದೇ ಆಯ್ತು. ಕಾರ್ಡು ಕದ್ದನೋ ಇಲ್ಲ ನಿಜವಾಗಲೂ ಆಯ್ತೋ ದೇವರಿಗೆ ಗೊತ್ತು. ನಂದು ರಮ್ಮಿಯೇ ಆಗದೆ ಇದ್ದರಿಂದ ಬುಕ್ ಆಯ್ತು. ನಿಮ್ಮಿ ಕೌಂಟು ಹತ್ತರ ಒಳಗಿದ್ದಿದ್ದು ಅವನದೇ ಕೃಪೆ. ಯಾಕೆಂದ್ರೆ ಅವಳಿಗೆ ಕಾರ್ಡು ಕೊಡ್ತಾ ಇದ್ದವ ಅವನೇ. ರಚ್ಚು ಯಾವಾಗದಂತೆ ನಲವತ್ತರ ಕೌಂಟು ಕೊಟ್ಟ. ಅವನ ಕೈಲಿ ಯಾವಾಗಲೂ ರಮ್ಮಿಯಾಗದ ರಾಜ ರಾಣಿ ಇತ್ಯಾದಿ ದೊಡ್ಡ ಕಾರ್ಡುಗಳ ದಂಡೇ ಇರೋದರಿಂದ ಅದೇನು ಅಂತಾ ಅಚ್ಚರಿಯ ವಿಷಯ ಅಲ್ಲ ಬಿಡಿ.

ಮತ್ತೆ ಕಾರ್ಡು ಮಿಕ್ಸ್ ಮಾಡೋವಾಗ ಕೇಳ್ದೆ “ಏನೋ ಸಿಗರೇಟು ಬಿಟ್ಟೆ ಅಂತ ಕೇಳ್ದೆ. ನಿಜವಾ?”. “ಹೂಂ ಕಣೆ. ಬಿಟ್ಬಿಟ್ಟೆ” ಅಂದ ಅದೇನು ದೊಡ್ಡ ವಿಷಯವೇ ಅಲ್ಲ ಅನ್ನೋ ತರ. ಆರು ವರ್ಷದ ಹಿಂದೆ “ಏನೋ ಸಿಗರೇಟು ಶುರು ಮಾಡಿದ್ದೀಯಂತೆ? ಯಾವಾಗಿಂದ ಇದೆಲ್ಲ?” ಅಂದವಾಗ್ಲೂ ಹೀಗೆ ಹೇಳಿದ್ದನಾ? ನೆನಪಿಲ್ಲ. ಆದ್ರೆ ಆವಾಗ್ಲೂ ಹೀಗೆ ಇದ್ದ. ಆಗಷ್ಟೇ ಇದ್ದ ಕಂಪನಿ ಬಿಟ್ಟು ಬೇರೆ ಕಂಪನಿಗೆ ಸೇರಿದ್ದ. “ಯಾಕೋ? ಆ ಕಂಪನಿ ಅಷ್ಟು ಆರಾಮಾಗಿತ್ತಲ್ಲೋ?” ಅಂದ್ರೆ “ಅದ್ಕೆ ಬಿಟ್ಟಿದ್ದು” ಅಂತ ನಕ್ಕಿದ್ದ. ಅದಾಗಿ ಒಂದು ತಿಂಗಳಿಗೆ ಈ ಸಿಗರೇಟಿನ ವಿಷಯ ಗೊತ್ತಾಗಿದ್ದು. ಕೆಟ್ಟ ಚಟಗಳು ಯಾವಾಗ ಬೇಕಾದ್ರೂ ಅಂಟಿಕೊಳ್ಳಬಹುದಾದರೂ ಈ ವಯಸ್ಸಿಗೆ ಸಿಗರೇಟಿನಂತಾ ಚಟಕ್ಕೆ ಬಳಿ ಬೀಳೋದು ಕಮ್ಮಿ. ಅದನ್ನ ಕೇಳಿದ್ರೆ ಯಾವುದೋ ಸಂಸ್ಕ್ರತ ಶ್ಲೋಕ ಹೇಳಿ ಅರ್ಧ ಗಂಟೆ ಪ್ರವಚನ ಕೊಟ್ಟಿದ್ದ.

ಈಗ ಕೆಣಕಬೇಕು ಅನ್ನಿಸ್ತು. “ಅಲ್ಲಾ ಕಣೋ, ಸಿಗರೇಟು ಯಾಕೆ ಒಳ್ಳೆ ಚಟ ಅನ್ನೋದರ ಮೇಲೆ ನಿಂದೊಂದು thesis ಇತ್ತಲ್ಲ. ಈಗ ಬಿಡ್ತಾ ಇದ್ದೀಯ. ನಿನ್ನ thesis ನೀನೆ ಹೊಳೆಗೆ ಎಸೀತ ಇದ್ದೀಯ” ಅಂದೆ.

ಅವ ಕಾರ್ಡುಗಳನ್ನ ಜೋಡಿಸಿಕೊಳ್ತಾ ಇದ್ದ. ಒಮ್ಮೆ ಉದ್ದದ್ದೊಂದು ಉಸಿರು ಬಿಟ್ಟ. ಅವ ಪ್ರವಚನಕ್ಕೆ ರೆಡಿ ಆಗ್ತಾ ಇದಾನೆ ಅಂತ ಗೊತ್ತಾಯ್ತು. “ತಡಿ. ಟೀ ಮಾಡ್ಕೊಂಡು ಬರ್ತೇನೆ” ಅಂತ ಎದ್ದೆ. ಕೈ ಹಿಡಿದು ಎಳೆದು ಕೂರಿಸಿದ. “ಇದು ವಿಸ್ಕಿ ಟೈಮು. ಟೀ ಟೈಮಲ್ಲ. ನಂಗೆ ಟೀ ಬೇಕಾಗಿದ್ರೆ ಆಗಲೇ ಕೇಳ್ತಿದ್ದೆ. ತಗಾ. ಈಗ ವಿಷಯಕ್ಕೆ ಬರಾಣ. ನೋಡು ನೀನು theory thesis ಅಂತೆಲ್ಲಾ ಹೇಳಿದ್ಯಲ್ಲ ಅವೆಲ್ಲ ಏನು ಅಂತ ಗೊತ್ತಾ ನಿಂಗೆ? ಯಾವ ಥಿಯರಿಯೂ ಎಲ್ಲಾ ಕಾಲಕ್ಕೂ ಸತ್ಯ ಆಗಿರೋಲ್ಲ. ನನ್ನ ಥಿಯರಿಗಳೂ ಅಷ್ಟೇ. ಇವತ್ತು ಸತ್ಯ ಅಂತ ಕಂಡದ್ದು ನಾಳೆಗೆ ಪಕ್ಕಾ ಕಾಮೆಡಿ ಪೀಸ್ ಆಗಬಹುದು. ಹಂಗಾಗಿ ನಾ ಸತ್ಯ ಅನ್ನೋದನ್ನೇ ನಂಬಲ್ಲ. ಸುಮ್ನೆ ಇವತ್ತು ಕಂಡಿದ್ದನ್ನ ಇವತ್ತು ಬದುಕ್ತೀನಿ. ಯಾರಾದ್ರು ಕಾರಣ ಕೇಳಿದ್ರೆ ಹಿಂಗೆ ಒಂದು lecture ಕೊಟ್ರಾಯ್ತು. ನಿನಗೂ ಅರ್ಥ ಆಗಲ್ಲ. ನಂಗೂ ಅರ್ಥ ಆಗಿರಲ್ಲ. ಸುಮ್ನೆ ನವ್ಯ ಕಾವ್ಯದ ತರ” ಅಂದ. ರಚ್ಚು ಕೂತಲ್ಲೇ ಮಿಸುಕಾದುತ್ತಿದ್ದ. ನಿಮ್ಮಿ ಜೋಕರುಗಳನ್ನ ತೆಗೆದು ಎಡ ಮೂಲೆಗೆ ಜೋಡಿಸುತ್ತಿದ್ದಳು. ನಾನು ಅವನ ಮುಖ ನೋಡಿದೆ. ಸೀರಿಯಸ್ಸಾಗಿ ಹೇಳಿದ ಹಾಗೆ ಕಂಡ.
[ಮುಂದುವರೆಯೋ ಚಾನ್ಸ್ ಇದೆ]

Advertisements
ಟಿಪ್ಪಣಿಗಳು
  1. venkataraghavanhegde ಹೇಳುತ್ತಾರೆ:

    ಸಖತ್ತಾಗಿದೆ…. ಮುಂದಿನ ಭಾಗ ಬೇಗ ಬರಲಿ

  2. Nagaraj Edehalli ಹೇಳುತ್ತಾರೆ:

    ಇಷ್ಟೊಳ್ಳೆ ಕತೇನ ಹಾಗೆ ಬಿಟ್ರೆ ಚೆನಾಗಿರಲ್ಲ ಸರ್. ರಾಮಚಂದ್ರ ಭಾವೆಯರ ಇದೇ ರೀತಿಯ ಕತೆಯೊಂದು ನೆನಪಾಯ್ತು . ನಿರ್ಮಾಲ್ಯ ಅಂತ ಕತೆಯ ಹೆಸರು. ಒಳ್ಳೆಯ ಬರಹಗಳು ಓದಿ ಎಷ್ಟು ವರ್ಷ ಆದ್ರೂ ನೆನಪಿರ್ತವೆ. Will be checking this page. Hope to see the next part of the story soon. 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s