Archive for the ‘ಕತೆಯಲ್ಲ ಕವಿತೆಯೂ ಅಲ್ಲ’ Category

ಎಲ್ಲೋ ಜೋರು ಮಳೆ ಸುರಿದಿರಬೇಕು. ಇಳೆ ಕರಗಿ ಸಾಗರದೆಡೆ ಹೊರಟ ಹಾಗೆ ಸೀತಾನದಿ ಕೆಂಪು ಕೆಂಪಾಗಿ ಸದ್ದು ಮಾಡುತ್ತಾ ಹರಿಯುತ್ತಿತ್ತು.

ಅವಳು ಎಲ್ಲೋ ನಮ್ಮ ಹಾಗೆ ಹಿಡಿದ ಕೊಡೆಗಳ ಮೇಲೆ ಬಿದ್ದ ಹನಿ ಇನ್ನೆಲ್ಲೆಲ್ಲೋ ಹರಿದು ಕೊನೆಗೆ ಮತ್ತೆ ಮೋಡ ಸೇರಿ ಹನಿಯಾಗುವ ಕೌತುಕದ ಬಗ್ಗೆ ನೀರು ನೋಡುತ್ತಾ ಕತೆ ಹೇಳುತ್ತಿದ್ದಳು. ಮಂಜಿನಂತೆ ಬೀಳುತ್ತಿದ್ದ ಮಳೆಗೆ ಅವಳ ಕೇಶರಾಶಿಯಿಂದ ಹೊರಡುತ್ತಿದ್ದ ಅವಳದೇ ಘಮದ ಸದ್ದಿನ ಮಾಧುರ್ಯ ಸವಿಯುತ್ತಾ ನಿಂತಿದ್ದೆ.

ಜೋರಿರಲಿಲ್ಲ; ಜುಮುರು ಮಳೆಯಷ್ಟೇ. ಗಾಳಿಯ ಸೆಳೆತ, ಕುಳಿರು ಹೆಚ್ಚಿತ್ತು. ನನ್ನ ಚಳಿ ಕಮ್ಮಿಯಾಗಲೊ ಏನೋ ನದಿಯಿಂದ ಬೀಸಿ ಬರುವ ಗಾಳಿಗೆ ಅಡ್ಡ ನಿಂತಿದ್ದಳು. ಆದರೂ ಮುಖಕ್ಕೆ ಗಾಳಿ ಬೀಸಿ ಬೀಸಿ ಹೊಡೆಯುತ್ತಿತ್ತು. ಐದಡಿ ಏಳು ಮಲ್ಲಿಗೆ ತೂಕದ ರಾಜಕುಮಾರಿ ಅಂತ ನಗಿಸುತ್ತಿದ್ದದ್ದು ನೆನಪಾಯಿತು.

“ಚಳಿ ಕಣೆ” ಅಂತ ಬಳಸಿ ಹಿಡಿದೆ. ಹತ್ತಿರದಲ್ಲೇ ಮನೆಗಳ ಬೆಳಕು ಹನಿಗಳ ವಕ್ರೀಭವನದ ನಡುವೆ ಆಡುತ್ತಿತ್ತು. ಮೆಲ್ಲಗೆ ಎದೆಗೊರಗಿದಳು.

ಹತ್ತು ವರ್ಷಗಳೇ ಕಳೆದು ಹೋಗಿವೆ. ಅಂದು ಬಿಟ್ಟು ಬಂದ ಗುಲ್ ಮೊಹರುಗಳಲ್ಲಿ ಈಗಲೂ ಹೂವಿರಬಹುದು. ಅದೇ ಮರಗಳ ಕೆಳಗೆ ಮತ್ತಾರೋ ಇಬ್ಬರು ಅದೇ ಅರ್ಥವಿಲ್ಲದ ಮಾತುಗಳಿಗೆ ನಗುತ್ತಾ ಇರಬಹುದು.

“ನಿಂಗೆ ಯಾವ ಜನ್ಮದಿಂದ ನಾನಿಷ್ಟ?”

ಗಾಳಿ ಒಮ್ಮೆ ಕಾಡ ನಡುವೆ ಹುಟ್ಟಿ ಮತ್ತೊಂದಿಷ್ಟು ಚಳಿಯನ್ನು ನೀರ ಮೇಲಿಂದ ಬೊಗಸೆ ಕೈಗಳಲ್ಲಿ ಎತ್ತಿಕೊಂಡು ಬಂದು ರಾಚಿತು. ಗಾಳಿಗೆ ಕುಣಿದ ತಲೆಗೂದಲನ್ನ ಮೆಲ್ಲ ಸರಿಸಿ ಕತ್ತಿಗೆ ಮುತ್ತಿಟ್ಟೆ.

ಕೈಗಳ ಬಿಗಿ ಸಡಿಲವಾಗದ ಹಾಗೆ ಮೆಲ್ಲ ನನ್ನೆಡೆಗೆ ತಿರುಗಿದಳು.

ಕವಿಗಳು ಬರೆವ ಹಾಗೆ ಅವಳ ಅಧರಗಳು ಮೆಲ್ಲ ನಡುಗುತ್ತಿದ್ದವೇ? ಕಣ್ಣುಗಳಲ್ಲಿ ಬೆದರಿದ ಜಿಂಕೆಮರಿಯೊಂದಿತ್ತೇ?

ಇಲ್ಲ.

ಚಳಿಗಾಲದ ಸಂಜೆಗಳಲ್ಲಿ ಸದ್ದಿರದೆ ಹರಿವ ನದಿ ಅವಳ ಕಣ್ಣಲ್ಲಿತ್ತೇ? ಬಹುಷಃ ಅದೇ ಸರಿಯೇನೋ!

ಹಿಂದೊಮ್ಮೆ ಶಾಂತ ಸ್ವಭಾವದ ಇದೇ ನದಿಯ ಕಣಿವೆಗಳಲ್ಲಿ ಮುಳುಗಿ ಉಸಿರು ನಿಂತದ್ದು, ಯಾರೋ ಬಂದು ನೀರಿನಿಂದ ಮೇಲೆತ್ತಿ ಬದುಕಿಸಿದ್ದು ನೆನಪಾಯ್ತು.

ಎಷ್ಟು ನೆನಪುಗಳು! ನಮ್ಮ ಉಸಿರು ನಿಂತ ಮೇಲೆ ನಮ್ಮ ನೆನಪುಗಳು ಎಲ್ಲಿ ಹೋಗುತ್ತವೆ? ಕಾಲಗರ್ಭದಲ್ಲಿ ನಮ್ಮ ಅರ್ಥವೇನು?

ಕಪ್ಪುಗಟ್ಟಿದ ಮುಗಿಲು ಯಾರೋ ತಟ್ಟಿ ಎಬ್ಬಿಸಿದ ಹಾಗೆ ಸುರಿಯಲು ಪ್ರಾರಂಭಿಸಿತು. ತೆಕ್ಕೆ ಬಿಡದೆ ಹಾಗೇ ರಸ್ತೆಯ ಆ ಬದಿಗೆ ನಡೆದೆವು. ಕಪ್ಪು ಕಾರೊಂದು ಕತ್ತಲೆ ಸೀಳುತ್ತಾ ಘರ್ಜಿಸುತ್ತಾ ಬರುತ್ತಿದೆ. ಈ ಸರಿರಾತ್ರಿ ಈ ಮಲೆನಾಡಿನ ರಸ್ತೆ ಮಧ್ಯೆ ನರಮನುಷ್ಯರು ತಬ್ಬಿಕೊಂಡು ನಡೆಯುತ್ತಿರುತ್ತಾರೆಂದು ಕನಸಲ್ಲೂ ಎಣಿಸಿರದ ಚಾಲಕ ಒಂದಷ್ಟು ಗೊಂದಲ ಒಂದಷ್ಟು ಭಯದ ನಡುವೆ ಕಾರನ್ನ ಸರ್ರೆಂದು ಬಲಕ್ಕೆಳೆದು ಬಯ್ಯುತ್ತಾ ಮುಂದೆ ಹೋದ.

“ಯಾಕೆ ಅಲ್ಲಿಂದ ಎಳ್ಕೊಂಡು ಬಂದೆ? ಎಷ್ಟು ಚಂದ ಇತ್ತು.”

“ಮಳೆ ಯಾವಾಗ್ಲೂ ಚಂದಾನೇ. ಹಾಗಂತ ಈ ಮಳೇಲಿ ನೆಂದ್ರೆ ನಾಳೆ ಹುಷಾರಿಲ್ಲ ಅಂತಾದ್ರೆ ನಿಮ್ಮಪ್ಪ ಕೇಳೋದು ನನ್ನೇ. ನನ್ ಜೊತೆ ಈ ರಾತ್ರೀಲಿ ಸುತ್ತೋಕೆ ಬಿಟ್ಟಿದ್ದೇ ದೊಡ್ಡದು ಗೊತ್ತಲ್ವಾ?”

“ಚಂದ ಇದೆ ಅಂದಿದ್ದು ಮಳೆಗಲ್ಲ”

ತೆಕ್ಕೆ ಯಾಕೋ ಬಿಗಿಯಾಯ್ತು. ಮೆಲ್ಲ ಮುಖವೆತ್ತಿ ಕಣ್ಣಲ್ಲಿ ಕಣ್ಣಿಟ್ಟವಳು ಏನು ಹೇಳಹೊರಟಿದ್ದಾಳೆ ಅಂತ ಗೊತ್ತಾಗಲಿಲ್ಲ.

“ದಡ್ಡ ಕಣೋ ನೀನು” ಅಂದವಳು ಕುತ್ತಿಗೆ ಬಳಸಿ ತುದಿಗಾಲ ಮೇಲೆ ನಿಂತು ಕಣ್ಣಿಗೆ ಕಣ್ಣಿಟ್ಟಳು.

ಅವಳ ತುಟಿಗಳಲ್ಲಿ ತಾಜಾ ಮಳೆಹನಿಯ ಘಮವಿತ್ತು. ಮೆಲ್ಲಗೆ ಕೆಳದುಟಿಯನ್ನು ಆವರಿಸುವಾಗ ಅವಳ ಮೂಗುಬೊಟ್ಟು ಕೆಂಪಾದಂತನ್ನಿಸಿತು. ಮಳೆಗೆ ತುಸು ನೆಂದಿದ್ದ ಕಿವಿಯನ್ನು ಅಂಗೈ ತಲುಪಿದಾಗ ಇಷ್ಟೇ ಇಷ್ಟು ಬಲಕ್ಕೆ ಕತ್ತು ಜರುಗಿಸಿ ಬಾಹುಬಂಧನ ಬಿಗಿಗೊಳಿಸಿದಳು.

ಎಷ್ಟು ಹೊತ್ತಿದ್ದೆವು ಆ ಕ್ಷಣಗಳಲ್ಲಿ? ಅಷ್ಟಕ್ಕೂ ಕಾಲಪ್ರವಾಹವನ್ನು ಇಷ್ಟಿಷ್ಟು ಅಂತ ಲೀಟರುಗಳಲ್ಲೂ ನಿಮಿಷಗಳಲ್ಲೂ ಅಳೆಯುವುದು ಮೂರ್ಖತನ ತಾನೇ? ಎಂದೂ ಸಾಲದಷ್ಟು ಅಂತಂದರೆ ಸಾಲದೆ?

ಇನ್ನೇನು ಹೊರಡಬೇಕು. ನಮ್ ನಮ್ಮ ಪ್ರಪಂಚಗಳ ಮೂಲೆಯಲ್ಲೆಲ್ಲಾದರೂ ಕದ್ದೊಯ್ದ ಕ್ಷಣಗಳನ್ನು ಬಚ್ಚಿಡಬೇಕು.

ಹೊರಗೆ ಮಿಂಚು ಗುಡುಗುಗಳ ಜುಗಲ್ಬಂಧಿ. ಮಳೆ ನಿಂತಿತ್ತು.

ಸೀತಾನದಿಯಲ್ಲಿ ಅದೇ ಪ್ರಶಾಂತಿಯಿತ್ತು.

ಮುಗಿಲು ಕೆಂಪಾಗಲು ಇನ್ನು ಸ್ವಲ್ಪೇ ಹೊತ್ತು. ನಿಶ್ಯಬ್ಧದ ರುಚಿ ಹಾಳಾಗಬಾರದು ಅಂತಲೋ ಏನೋ, ಸೇತುವೆಯ ಕೆಳಗೆ ತುಂಗೆ ಮೆಲ್ಲ ಸದ್ದಿರದೆ ಹರಿಯುತ್ತಿದ್ದಳು. ಕುಳಿತಿದ್ದ ಬಂಡೆ ಇನ್ನೂ ಮದ್ಯಾಹ್ನ ಸೂರ್ಯ ಕಳಿಸಿದ್ದ ಶಾಖವನ್ನ ಹಿಡಿದಿಟ್ಟಿದ್ದರಿಂದ ಅಪ್ಯಾಯಮಾನವಾದ ಬಿಸಿ ಇತ್ತು. ತಣ್ಣನೆ ನೀರಲ್ಲಿ ಕಾಲಿಳಿಬಿಟ್ಟು ಕುಳಿತು ನದಿಗುಂಟ ಬೆಳೆದ ಹಸಿರನ್ನೇ ನೋಡುತ್ತಿದ್ದೆ. ಸೇತುವೆಯ ಮೇಲೆ ಆಗಾಗ ವಾಹನಗಳು, ಅಬ್ಬೇಪಾರಿ ಜನರೂ ಹರಿದು ಹೋಗುತ್ತಿದ್ದರು. ಹೀಗೆ ಹರಿದು ಹೋದಾಗಲೆಲ್ಲ ಸೇತುವೆಯ ಕಮಾನಿನ ಮೇಲೆ ಸುಕಾ ಸುಮ್ಮನೆ ಕೂತು ಕಾಲಹರಣ ಮಾಡುತ್ತಿದ್ದ ಕಾಗೆಗಳು, ಪಾರಿವಾಳಗಳು ಹಾರಿ ಅನತಿ ದೂರದಲ್ಲಿ ಬೇಕಾಬಿಟ್ಟಿ ಬೆಳೆದು ನಿಂತಿದ್ದ ಹಸಿರು ಮರಗಳ ಮೇಲೆ ಬಾಡಿಗೆಗೆ ಮನೆ ಮಾಡುತ್ತಿದ್ದವು ಮತ್ತು ಮತ್ತೆರಡೇ ಚಣದಲ್ಲಿ ನೆಂಟರ ಮನೆಯಿಂದ ಮನೆಗೆ ಮರಳುವಂತೆ ಹಾರಿ ಸೇತುವೆಯ ಬಾಹುಗಳೊಳಗೆ ಸೇರಿಬಿಡುತ್ತಿದ್ದವು.

“ಎಷ್ಟು ಚಂದ ಇದೆ ಅಲ್ಲಾ ಈ ಜಾಗ! ಒಳ್ಳೇ ಕವಿತೆ ಇದ್ದ ಹಾಗಿದೆ”

ಪಕ್ಕದಲ್ಲಿ ಅವಳು ಕುಳಿತಿದ್ದಾಳೆ ಎಂದು ಅಚಾನಕ್ಕಾಗಿ ನೆನಪಾಯಿತು. ಇಷ್ಟು ಹೊತ್ತು ಏನೂ ಯೋಚನೆ ಮಾಡದೆ ಆರಾಮಾಗಿದ್ದೆ. ಈಗ ಸುಮ್ಮನೆ ಸಂಬಂಧವೇ ಇರದ ಮಾತು. ಮದುವೆ ಮುಗಿಸಿ ಒಬ್ಬನೇ ಬಂದಿದ್ದರೆ ಒಳ್ಳೆಯದಿತ್ತು.

“ಒಳ್ಳೇ ಕವಿತೆ ಅಂತ ಇರುತ್ತಾ? ಒಳ್ಳೇ ಕವಿತೆಗೂ ಕೆಟ್ಟ ಕವಿತೆಗೂ ಏನು ಡಿಫರೆನ್ಸು?”

“ಏನೋಪ್ಪಾ”

“ಈ ಡಿಫರೆನ್ಸೇ ಗೊತ್ತಿಲ್ಲ. ಮತ್ತೆ ಅದು ಹೆಂಗೆ ನನ್ನ ಬಗ್ಗೆ ಎಲ್ಲಾ ಗೊತ್ತು ಅಂತ ಹೇಳ್ತೀಯ?”

“ಏನು? ಏನು ಸಂಬಂಧ ಅದ್ಕೂ ಇದ್ಕೂ? ನೀನೇನು ಕವಿತೇನ? ಅದ್ರಲ್ಲೂ ಒಳ್ಳೇ ಕವಿತೇನ?”

ಹ್ಮ್. ಯಾಕೆ ಬೇಕಿತ್ತು ಈ ಕಾಡು ಹರಟೆ? ನದಿ ಅದರ ಪಾಡಿಗೆ ಹರೀತಿತ್ತು. ಸೂರ್ಯ ಇನ್ನೇನು ಮುಳುಗ್ತಾ ಇದ್ದ. ತೆಪ್ಪಗೆ ಇವಳನ್ನ ಛತ್ರಕ್ಕೆ ಬಿಸಾಕಿ ಲಾಡ್ಜು ಸೇರಬಹುದಿತ್ತು. ತುಂಗಾ ಕಾಲೇಜಿನಲ್ಲಿ ಸಾಹಿತ್ಯ ಓದಿದ ಮಾತ್ರಕ್ಕೆ ಅದನ್ನೆಲ್ಲಾ ನೆನಪಿಟ್ಟುಕೊಂಡು ಬೇಡದ ಹೊತ್ತಲ್ಲಿ ಬೇಡದ ಜನರ ಜೊತೆ ಹರಟುವುದು ಯಾಕಪ್ಪಾ.

“ನಾನು ಕೆಟ್ಟ ಗದ್ಯ. ನಡಿ ಈಗ. ನಿನ್ನ ಅಪ್ಪ ಇಷ್ಟು ಹೊತ್ತಿಗೆ ಪೋಲಿಸ್ ಕಂಪ್ಲೇಂಟ್ ಕೊಡದೆ ಇದ್ರೆ ನಿನ್ನ ಛತ್ರಕ್ಕೆ ಬಿಟ್ಟು ನಾನು ಬೆಂಗಳೂರಿಗೆ ಬಸ್ಸು ಹುಡುಕಬೇಕು”

ವಾಪಾಸು ಸೇತುವೆಯ ಮೇಲೆ ಬರುತ್ತಿದ್ದಂತೆ ಕಮಾನಿನ ಹಕ್ಕಿಗಳೆಲ್ಲಾ ಕರ್ಕಶ ದನಿಯಲ್ಲಿ ಕೂಗುತ್ತಾ ದೂರ ತೀರಕ್ಕೆ ಹಾರಿದವು. ಮತ್ತೆ ಮರಳುತ್ತವೋ ಇಲ್ಲವೋ!!

ಗೊತ್ತು.
ಸೈಡ್ ಸ್ಟಾಂಡು ತೆಗೆಯದೆಲೆ
ಟಾಪು ಗೇರಲ್ಲಿ ಹೋಗೋದು
ನಿಂಗೇನು ಹೊಸದಲ್ಲ.
ಆದರೂ…
ಒಮ್ಮೊಮ್ಮೆ ನೀ ಹೋಗೋ ಹೊತ್ತಿಗೆ
ಲಿಫ್ಟು ಬಾಗಿಲು ತೆಗೆದೇ ಇರುತ್ತೆ
ಅಂತ ಯಾವ ಗ್ಯಾರಂಟಿಯೂ ಇರೋಲ್ಲ.
ನೀ ಬಂದೇ ಬರ್ತೆ ಅಂತ ಲಿಫ್ಟಿಗೇನು ಗೊತ್ತು?

ಬರಿದೇ ತುಟಿ ಬಿಚ್ಛಿದ ಮಾತ್ರಕ್ಕೆ
ಅದೊಂದು ನಗು ಆಗುತ್ತೆ ಅಂತ
ಇನ್ನೂ ನಂಬಿದ ಮಾತ್ರಕ್ಕೆ ನಿಂಗೆ
ಮುಗ್ಧ ಅಂತನ್ನೋ ಸರ್ಟಿಫಿಕೇಟೇನು ಸಿಕ್ಕೋಲ್ಲ.
ಈ ಭಾನುವಾರ ಮೆಟಾಲಿಕ ಕನ್ಸರ್ಟು
ಸುಮ್ನೆ ಬರ್ಬೇಡ
ನೀ ಹಾಗೇ ಬಂದ್ರೆ ಮೆಟಲ್ಲಿಗೆ
ಮರ್ಯಾದೆ ಇರೋಲ್ಲ.

ಹಿಂಗೆ ಗೀಚ್ತಾ ಇರು
ಒಂದಿವ್ಸ ಮೂರು ಮೂವತ್ತರ ಟ್ರೈನಿಗೂ
ನಿಲ್ಲೋಲ್ಲ ಆಟ.
ಕವನಕ್ಕೆ ಅರ್ಥ ಇರ್ಲೇ ಬೇಕು ಅಂತ
ನೀ ರಚ್ಚೆ ಹಿಡಿದ್ರೆ
ಜೀವನಕ್ಕೇನು ಅರ್ಥ ಅಂತ ಕೇಳ್ಬೇಕಾಗುತ್ತೆ
ನನ್ ಹತ್ರ ಸ್ವಲ್ಪ ಹುಶಾರು.

ಇವು ಕನ್ನಡದ
ಹೈಕುಗಳಲ್ಲ ಮಾರಾಯ್ರೆ
ಆಂಗ್ಲದ hikeಗಳು!

ಸಾಧಾರಣದಿಂದ ಭಾರೀ ಮಳೆ
ಅನ್ನೋ ಮಂತ್ರ ಗೊತ್ತುಂಟಲ್ಲ.
ಆಮೇಲೆ ಆಗಿದ್ದೆಷ್ಟು ಅಂತ
ಕೇಳಿದವರೇ ಇಲ್ಲ!

ನಮ್ಮಲ್ಲೋ ಒಂದಿದೆ ಮಾರಾಯ್ರೇ
ಕರೀತಾರೆ ಅವಮಾನ ಇಲಾಖೆ ಅಂತ ಎಲ್ಲ.
ಅದೂ ಹಿಂಗೇ
ಹವಾಮಾನ ಇಲಾಖೆದೇ ಕಾಪಿ.
ಮೆನೆಜರ್ರೋ ಟೀ ಎಲ್ಲೂ
ಕೂತ್ಕಂಡು ಕುಡೀತಾರೆ ಕಾಫಿ
ಬರೀತಾರೆ ಇಷ್ಟಿಷ್ಟುದ್ದ mailಉ
ಹಿಂದಿನ್ ಸಲಕ್ಕಿಂತ ಖಂಡಿತ ಮೇಲು

ಈ ಬಾರಿ ಭಾರೀ ಭಾರೀ
ಗುಡುಗು ಸಿಡಿಲು.
ಭಾರೀಯಿಂದ ಅತಿ ಭಾರೀ hikeಉ
ಅಂತೆಲ್ಲ ಬಂದ್ವೇ ಬಂದ್ವು mailಉ.
ನಾವೂ ಕೂತಿದ್ವು ಬಾಯಿ ಕಳೆದು.

ಅಯ್ಯೋ ಅಯ್ಯೋ
ಕೊನೆಗೋ hikeಉ ಬಂತಲ್ಲ
ಸ್ವಾತಿ ಮಳೆ ಹಂಗೆ
ಬೇಲಿ ಹೊರಗೇ ನಿಲ್ತಲ್ಲ!

ಮನಸ ಒಣಗಿಸಿ ಜೋಪಾನವಾಗಿಟ್ಟಿದ್ದೆ
ನೀ ಮಳೆ ಸುರಿಸಿ ನೆನೆಯಿಸಿಬಿಟ್ಟೆ
ಈಗ ಏಳುತ್ತವೆ ಫಂಗಸ್ ಗಳಂತ ಕವಿತೆಗಳು

ನೀನು

Posted: ಏಪ್ರಿಲ್ 20, 2011 by sukhesh in ಕತೆಯಲ್ಲ ಕವಿತೆಯೂ ಅಲ್ಲ

ನಿನ್ನ ನೆನಪೆಂದರೆ ಅದೊಂದು ನಿರಂತರ ಅಚ್ಚರಿ. ಬಿರು ಬೇಸಿಗೆಗೆ ತಂಗಾಳಿಯಾಗಿ, ಮಾಗಿಯ ಚಳಿಗೆ ಎಳೆ ಬಿಸಿಲಾಗುವ ನೀನು ಸುಡು ಬೆಂಕಿಯಾಗಿ ಸುಡುವಾಗ, ಬಿರುಗಾಳಿಯಾಗಿ ಕೊಲ್ಲುವಾಗ ನೀನು ವರವೋ ಶಾಪವೋ, ನಾನು ಪಾಪಿಯೋ ತಿಳಿಯದೆ ಕಂಗಾಲಾಗುವೆ. ಒಮ್ಮೊಮ್ಮೆ ಸಾಯಿಸಿ ಇನ್ನೊಮ್ಮೆ ಬದುಕಿಸುವ ನಿನಗೆ ನಾನು ಯಾವ ಹೆಸರು ಕೊಡಲಿ?

ಅರ್ಥ

Posted: ಏಪ್ರಿಲ್ 20, 2011 by sukhesh in ಕತೆಯಲ್ಲ ಕವಿತೆಯೂ ಅಲ್ಲ

ಅಸೂಯೆ-
ಮಳೆ ಹನಿ ಚುಂಬನಕೆ ಗುಲ್ ಮೊಹರ್ ಅರಳುವಾಗ ನನ್ನೆದೆಯ ಬೇಗೆ
ನಿರ್ವಾಣ-
ಜುಮುರು ಮಳೆಯಲ್ಲಿ ಸಿಗರೇಟಿನ ಹೊಗೆ