Archive for the ‘ನನ್ನ ಕವಿತೆ’ Category

ರಂಗಗೀತೆ

Posted: ಮಾರ್ಚ್ 5, 2017 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ರಂಗದಿಂದೊಷ್ಟು ದೂರ
ಸರಿದರೆ
ನಟ ಪ್ರೇಕ್ಷಕ ಮಾಸ್ತರೆಲ್ಲ
ಮೆಲ್ಲ ಮರೆಯಾಗಿ
ನನ್ನೊಳಗಿನ ನಾನು
ಮೈ ಮುರಿದು ಆಕಳಿಸಿ
ಏಳುತ್ತೇನೆ

ಆದರೂ…
ಕ್ಷೀಣ ದನಿಯ ಹಾರ್ಮೊನಿಯಮ್ಮು
ಕೇಳು ಕೇಳೆನುವ ಆತ್ಮಗೀತೆ

ಬರೆಯದ ರಂಗೋಲಿ
ಒಣ ಹವೆ ಧೂಳು
ಬಿಡುಗಡೆಯಿರದ ಪಾತ್ರ
ಗಳ ಇಲ್ಲೆ ಕಟ್ಟಿಟ್ಟು
ದಾಟಿ
ಹೊರಡಬೇಕಿದೆ

ಕಣಿವೆ ದಾಟದಿದ್ದೀತೆ ರಂಗಗೀತೆ?

ಎದೆ ಮೇಲೆ
ಕನಸಿಂದ ಹನಿದ
ಒದ್ದೆ ನೋವು
ಬೆಂಬಿಡದ ನೆರಳು.
ನಮ್ಮಾತ್ಮವನೆ ಮೀರುವುದುಂಟೆ ನಾವು?


ಬರೆದಿಟ್ಟ ಕವಿತೆ ಹಠಾತ್
ಮಾಯವಾದರೆ ಕಟ್ಟಿಟ್ಟ ಮೋಢ
ಮಳೆ ಸುರಿಸಿದಂತೆ
ರಸ್ತೆಗಳಲ್ಲಿ ಕೆನ್ನೆ ಗುಳಿಯ
ಹಾಗೆ ಗುಂಡಿಗಳು
ಬಿಡುಗಡೆಯ ಬೇಡಿ

ಇಂತಹ ಸಂಜೆಗಳಲ್ಲಿ
ಸಂದಿಗ್ಧ ಮುಗಿಲು
ಪಾಪಿ ಲೋಕದ ಕಪ್ಪು
ರಸ್ತೆಗಳ ಮೇಲೆ ಸುರಿವುದೇನನ್ನು
ಯಾಕಾಗಿ?

ಅಶಾಂತ ಟ್ರಾಫಿಕ್ಕಿನಡಿ ಸಿಲುಕಿದ
ಬಿಳಿ ಕಾರುಗಳೆಡೆ ತಪ್ತ
ಆತ್ಮಗಳು ಕಡಿಮೆ ದರದ ತರಕಾರಿಗಳ
ಹುಡುಕುವಾಗ
ಗಾಜಿನ ಪರದೆಯ ಹಿಂದೊಂದು
ಸಿಗರೇಟಿನಾತ್ಮವ ಸುಡುತ್ತೇನೆ
ಸುಳ್ಳು ತತ್ವಗಳು ಹುಟ್ಟಿ
ಮಾತನಾಡುತ್ತವೆ ಸುಳ್ಳು ಸಮಾಧಾನಗಳ

ಎಲ್ಲಿ ಹೋದೆ ಬೆಕ್ಕೆ?
ಒಣ ಹವೆ ಧೂಳು ಹೊಗೆಗಳ
ನಡುವೆ ಹಿಡಿ ಪ್ರೀತಿಯ ಲೆಕ್ಕ ಹಿಡಿವಾಗ
ಕಣ್ಣು ಕಟ್ಟಿಟ್ಟು ಯಾಕೆ ಹೋದೆ ಬಿಟ್ಟು?

ಕಡಲು

Posted: ಏಪ್ರಿಲ್ 1, 2015 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ನನ್ನ ಮೇಜಿನ ಮೇಲೊಂದು
ವಾರಸುದಾರರಿರದ ಡಬ್ಬಿ
ಎಲ್ಲಿಂದ ಬಂದೆ ಹಕ್ಕಿ?
ಏಳು ಸಮುದ್ರಗಳ ಉಪ್ಪುಪ್ಪು ನೀರ
ದಾಟುವ ಚಟವಾದರೂ ಯಾಕೋ?

ಹಿಂದೊಮ್ಮೆ
ಗೋವೆಯ ಕಡಲ ತಡಿಯ ಮೇಲೆ
ದಟ್ಟ ಬೇಸಿಗೆಯ ನಡುವೆ
ಕವಿದ ಕಪ್ಪು ಮುಗಿಲು
“ಮಳೆಯಾದೀತು ಕೂಸೆ” ಅಂದಿತು ಕಡಲು

ಕಿತ್ತಲೆ ಸಂಜೆಗಳಲ್ಲಿ
ಕಡಲಿಗೆ ಹರಟೆಯ ಹುಕ್ಕಿ
ಯುಗದ ಮರಳ ಮೇಲೆ ಅನಂತ ರಂಗೋಲಿ
ಕಪ್ಪು ಟೋಪಿ ಗನ್ನಿನ ಪತ್ತೆದಾರರು
ಕತೆಗಳೆಲ್ಲಾ ಸುಳ್ಳೇ ಸುಳ್ಳು

ಕೆನೆವ ಕಡಲು ಚಿಕ್ಕಿಗಳ ಆಯುತ್ತಿದೆ
ಹೇಳಬೇಕಾದ್ದೇನಿಲ್ಲ
ಮೇಲೆ ತಿಳಿ ಮುಗಿಲು
ಜೇಬಲ್ಲಿ ಎರಡು ಕಪ್ಪೆಚಿಪ್ಪು
ಕದ್ದು ಹೊರಟಿದ್ದೇನೆ
ಕೊಡವುತ್ತಾ ಹಿಮ್ಮಡಿಯ ಮರಳು

ಆಕಾಶವಾಣಿ ಭದ್ರಾವತಿಯ ತುಂಬ
ಪುಟಾಣಿ ಮನುಶ್ಯರು
ವಾರ್ತೆಗಳ ಓದಿ ಗುಡುಗು ಸಹಿತದ
ಸಾಧಾರಣ ಜೋರು ಮಳೆಗಳ
ಸುರಿಸಿ ನೆನೆದು
ಸ್ಕೂಲು ಮುಗಿದ ಮೇಲೆ
ಕುಂಟಾಪಿಲ್ಲೆಯಾಡುತ್ತಿದ್ದರು

ಮೈದಾನದ ಮೆದುನೆಲದ ಮೇಲೆ
ಮಳೆಗಾಲದ ಮಾಮೂಲು ಮಳೆ
ತನ್ನಿಂತಾನೆ ಹುಟ್ಟಿಬಿಡುವ
ಕವಿತೆ ಸಾಲ ಹಾಗೆ ಹಸಿರು ಪಾಚಿ
ನಡೆದ ಹಾಗೆಲ್ಲಾ ಪಡೆವ
ಕಾವ್ಯಾನುಭೂತಿ

ಫಿಲಿಪ್ಸಿನ ಕರಿ ಪ್ಲಾಸ್ಟಿಕ್ಕುಗಳ
ಒಡೆದು
ಬಂದಾರೆಂದು ಕಾದೆ ಒಂದಿಶ್ಟು ವರ್ಷ

ನೀಲಿ ವ್ಯಾನಿಂದಿಳಿದು
ಎದೆ ತುಂಬ ಕಾಗುಣಿತ
ಗೀಚಿದವಳು
ದೀರ್ಘ ಕೊಂಬುಗಳ ಎಸೆದು
ನಕ್ಕು ಪುಷ್ಪಕ ವಿಮಾನವೇರಿ
ಹೊರಟುಬಿಟ್ಟಳು

ರೇಡಿಯೋ ಅಲ್ಲೆಲ್ಲೋ
ನಿತ್ರಾಣ ಮಲಗಿದೆ
ಕವಿತೆ ಮಾತ್ರ ಕಾಯುತ್ತಿದೆ

ಎಲ್ಲಾ ಅಂದುಕೊಂಡಂತೆಯೇ…
ಡಿಸೆಂಬರಿನಲ್ಲಿ ಅದೇ ಚಳಿ
ನಿನಗೆಂದು ಬರೆದ ಕವಿತೆಗಳಿಗೆ
ಬೆಂಕಿ ಹಚ್ಚುವುದಿಲ್ಲ
ಜಾರಿ ಬರುವ
ನೆನಪುಗಳ ನೆನೆಯದಿರೋ ಯತ್ನ
ಜಾರಿಯಲ್ಲಿದೆ ಅಷ್ಟೆ

ರಸ್ತೆ ಬದಿ ಮರಗಳ ಸಾಲು
ಹಳದಿ ಎಲೆ ಹಾಸಿಗೆ
ಮಬ್ಬು ಕಣ್ಣಲ್ಲಿ
ಸುಳಿವ ಹಳೆಯದೊಂದು ಬಿಂಬ
ಜುಮುರು ಮಳೆಗೆ
ಸುರಿವ ಕಾರಣಗಳೇ ಇರದಾಗ
ಬದುಕಿಬಿಡಲು ಇರಲಿ
ಹಾದಿಯುದ್ದ
ನೆವಗಳ ಕಾರ್ತಿಕ ದೀಪ

ಕಾಗದದ ದೋಣಿ
ಕರಗುವರೆಗಷ್ಟೇ ಪಯಣ
ಸದ್ದಿರದೆ ಮುತ್ತಿಕ್ಕುವ ಗಾಳಿ
ನೀರಲೊಂದು ತಣ್ಣನೆ ಪುಳಕ
ಅಲೆಗಳೆಡೆ ಮೆಲ್ಲುತ್ತಾ
ಪಾನ್ ಫ್ಲೇವರಿನ ಚಾಕಲೇಟು
ಮೆಲ್ಲ ತೇಲಿಬಿಡುವ
ಯಾತರ ಅವಸರ?
ತಲುಪಲು ಗುರಿಯಿರದಾಗ
ಯಾವುದಾದರೇನು ದಡ?

ಗೊಂದಲ

Posted: ಅಕ್ಟೋಬರ್ 3, 2013 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ಬಿಡಿಸಿದಂತೆಲ್ಲಾ ಬಣ್ಣ
ಕಳೆದುಕೊಳ್ಳೋ ಚಿತ್ರಕ್ಕೆ
ಗಿರಾಕಿ ಹುಡುಕೋದಾದ್ರೂ ಹೇಗೆ?

ಗಾಂಧಿ ಜಯಂತಿಯ ದಿನ
ದೂರದ ಕಾವೇರಿ ನಮ್ಮನೆ
ನಲ್ಲಿಯಲ್ಲಿ ಹರಿವ ಬಗೆಗೆ
ಎರಡು ಕ್ಷಣ ಅಚ್ಚರಿಪಟ್ಟೆ

ಶ್ರೀನಗರದಲ್ಲೆಲ್ಲೋ ಒಮ್ಮೆ
ಕಿವಿಗೆ ಹಳೇ ರೇಡಿಯೋ ಹಚ್ಚಿ
ಯವ್ವನಕ್ಕೆ ಲಿಂಕು ಸಿಕ್ಕಂತೆ
ಕಣ್ಮುಚ್ಚಿ ಅಗಾಧ ಗದ್ದಲದ ನಡುವೆ
ತನ್ಮಯನಾದ ಮುದುಕ
ಸುಕ್ಕು ರೆಪ್ಪೆಯ ಕೆಳಗೆ ಕಪ್ಪು ಚುಕ್ಕಿಗಳು
ನೀಲಿ ನಕ್ಷತ್ರಗಳು
ಹಸುರಾಗುವ ಕ್ಷಣದಲ್ಲಿ
ಹಳದಿ ಮೋಡಗಳಿಂದ ಬಣ್ಣರಹಿತ ಮಳೆ
ಮತ್ತೀಗ ಹಠಾತ್ ಗೊಲಿಬಾರಿನಂತೆ
ಚದುರಿ ಬಿಡೋ ಮಂದಿ ಮತ್ತು ಮೋಡಗಳು

ಕಟ್ಟಿಗೆ ಒಲೆ ಪಕ್ಕ ಹಳೆ ಚಾದರ
ರಸ್ತೆ ಬದಿ ಆರಾಮ ನಿದ್ದೆ
ಕನೆಕ್ಟ್ ಆಗದ ಇಂಟರ್ನೆಟ್ಟು
ಮೈ ನಡುಗಿಸೋ ಏಸಿ
ನಿದ್ರೆ ಸುಳಿಯದ ವೇಳೆ
ಹುಡುಕುವ ಅಂದರೆ
ಕಳೆದದ್ದೇನು ಅಂತಲೇ ಗೊಂದಲ

ಮೇ ಮಳೆ

ಮಿಂದ ಇಳೆ

ತೊಳೆದು ಕೊಳೆ

 

ಅಂತ ಪ್ರಾಸಬದ್ದ ಬರೆದು

ಕುಳಿತೆ

ಆಯಾಸ ಒಂದಿಷ್ಟು ತಲೆನೋವು

ಈ ಮಳೆಯದೊಂದು ನಿಲ್ಲದ

ಗೋಳು

 

ಹೀಗೆಲ್ಲ ಅರ್ಥಹೀನ ಸುರಿವಾಗ

ಫುಟ್ಪಾತ್ ಚಾಕಲೇಟು ಕವರು

ಹಳೆ ಪ್ರಜಾವಾಣಿ ಪೇಪರುಗಳ

ಜೊತೆ ತೊಳೆದು ಬರುವ

ನೆರಳುಗಳು

ಹನಿಗಳ ಅಬ್ಬರಕ್ಕೆ

ಹೈ ಫೈ ಗಾಜು ಮಬ್ಬಾಗುತ್ತದೆ

ಇದ್ದಕ್ಕಿದ್ದಂತೆ ಪುರಾತನವಾಗುವ

ನಾನು ಗಾಜಿನಾಚೆ

ಚಲಿಸುವ ಬಿಂಬಗಳ ದಿಟ್ಟಿಸುತ್ತೇನೆ

 

ಸಂಜೆಮಳೆಯ ಈ ದಿನಗಳಲ್ಲಿ

ನಿನ್ನ

ಕೇಶರಾಶಿಯ ವಿಹ್ವಲತೆಗೆ

ಪಡುವಣದ ಗಾಳಿಯೇ ಕಾರಣವಿರಬೇಕು

ನಾಲ್ಕು ದಿಕ್ಕಲ್ಲೂ

ದಿಕ್ಕಾಪಾಲು ಹನಿಗಳು

ಭಾಷ್ಪೀಕರಣದ ಕತೆ ಹೇಳಿದ ಟೀಚರಾದರೂ ಎಲ್ಲಿ?

 

ಕಿಟಕಿಯಲ್ಲಿ ನೆಂದ

ಗುಲ್ಮೊಹರುಗಳ ಸಾಲು

ದಿಗಂತದಲ್ಲಿ

ಮಿಂಚಿನ ಕೋಲು

ಮೋಡದ ಮೇಲೆಲ್ಲೋ

ನೀನೇ ಚಲಿಸಿ ಒಮ್ಮೆ ನಕ್ಕು…

ಬೆಳೆದು ನಿಂತ ಅಂತರಕ್ಕೆ ನಿಟ್ಟುಸಿರು

ಊರ ತುಂಬ ಕವಿತೆಯೆಂಬ ಮಳೆ ಕೊಯಿಲು

ಸಂಜೆ ತಣ್ಣನೆ ಗಾಳಿಯೆಡೆ
ಸುಮ್ಮನೆ ನಡೆವಾಗಲೂ
ಕೈ ಚಾಚಿ
ನಕ್ಷತ್ರಗಳ ಹಿಡಿವ ನಕ್ಷತ್ರ
ನಕ್ಷತ್ರಗಳ್ಯಾಕೇ  ನಿನಗೆ?

ಚಳಿಗಾಲದ ಕೊನೆಯ ಸಂಜೆ
ಬೆಪ್ಪು ಮುಗಿಲ
ಹಿಂದೊಂದು
ತವಕಿತ ಮಿಂಚು ಮಳೆ
ಇನ್ನೇನು ನಿನ್ನ ರೆಪ್ಪೆಗಳ ಒಪ್ಪಿಗೆ ಸಾಕು
ಸುರಿದುಬಿಡಲು
ನಾ ಕರಗಿಬಿಡಲು

ಕಾಫಿ ಹೂಗಳ ಘಮಕ್ಕೆ
ತುಸು ನೆಂದ ಬೆಳದಿಂಗಳು
ಬೆರೆಸಿ
ತಲೆ ಒರೆಸಿ ತಂದು
ಮುಡಿಯಲ್ಲಿಟ್ಟರೆ
ನಿನ್ನ ಕಂಗಳ ಮುದ್ದಿಗೆ
ಒಂದಿಷ್ಟು ಅಸೂಯೆ

ಜಾಸ್ತಿ ನೆನೆಯಬೇಡವೆ ಹುಡುಗಿ
ಪ್ರೀತಿಯೆಂದರೆ ಹಾಗೇ
ಮಾಗಿಯ
ಕೊರೆವ ಚಳಿ ಮಳೆ
ತಿಳಿಯಲೇ ಬೇಡ
ಪೆಂಡ್ಯುಲಂ ನದಿಯ ಅಲೆ

ಕೊನೆ ಗುಕ್ಕು ಚಹಾ

Posted: ನವೆಂಬರ್ 2, 2012 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ನಿಜಾ ಹೇಳಲೇ?

ಈಗೀಗ ಚಳಿ ಯಾಕೋ ಹಿಡಿಸುತ್ತಿಲ್ಲ

 

ಬೆಳಗಾದರೆ ಕಣ್ಣ ಮುಂದೆ ಕವಿತೆಗಳ ಸಾಲು

ಹೊದ್ದು ಮಲಗಿಬಿಡುತ್ತೇನೆ

ಈ ಕವಿತೆಗಳ ಹಂಗು ಬೇಡವೇ ಬೇಡ

 

ಸೀತಾ ನದಿಯಲ್ಲಿ ಪುಟಾಣಿ ಅಲೆಗಳ ಕಣ್ಣಾ ಮುಚ್ಚಾಲೆ

ಸೇತುವೆಯ ಮೇಲೆ ನಿಂತರೆ ಎಲ್ಲವೂ ಸುಂದರ ಸರಳ

ಸಂಕ್ಷಿಪ್ತವಾಗಿ ಹೇಳುವುದಾದರೂ ಹೇಗೆ?

 

ಕೊನೆ ಗುಕ್ಕು ಚಹಾ ಮುಗಿವಷ್ಟರಲ್ಲಿ

ಹನಿ ಹನಿ ಇಬ್ಬನಿ; ನಿಶ್ಯಕ್ತ ಕಾಲುಗಳ ಅಸಹಕಾರ;

ಹೋಗುವುದಾದರೂ ಎಲ್ಲಿಗೆ? ಹೋಗಬೇಕಾದರೂ ಎಲ್ಲಿಗೆ?

ಕತೆ

Posted: ಜುಲೈ 20, 2012 by sukhesh in ನನ್ನ ಕವಿತೆ
ಟ್ಯಾಗ್ ಗಳು:, ,

ಅವಕಾಶದಲ್ಲಿ ರಸ್ತೆಗಳಿರುವುದಿಲ್ಲ

ನಾವ್ ನೆಟ್ಟ ಕನಸುಗಳ ನೆನಪಷ್ಟೇ

 

ಬೆಳಗಾದರೆ

ಬೈಕಿನ ಮೇಲೆ ರಸ್ತೆಯ ಧೂಳು

ಮಂಜು ಮಂಜು ಮನಸಲ್ಲಿ ನಿನ್ನ ನೆನಪು

ಹಸರು ಬರೆದು ಅಳಿಸುತ್ತೇನೆ

ಧೂಳಲ್ಲಿ ಧೂಳಾಗಲಿ ಹಳೆಯ ಸಾಲು

 

ಕೆಲ ಸಹಸ್ರ ನಿಮಿಷಗಳ ಹಿಂದೆ

ಒಂದು ನಿಜಾ ಸುರಿದ ಮಳೆ

ಅಂಗಳದ ತುಂಬೆಲ್ಲಾ ನಿನ್ನ ಚಿಟ್ಟೆ ಕಾಲ್ಗುರುತು

ಕೆಸರು ಕೆಸರು; ಆಗ ಚೆನ್ನಿತ್ತು

ಅಳಿಸಬೇಕಾಗಿದೆ ಈಗ

ಮಳೆಗೇಕೋ ಸುರಿವ ಮೂಡಿಲ್ಲ

ಹೋಗಲಿ ಬಿಡು; ಚೌಕಟ್ಟು ಹಾಕಿಸಿ ಅಟ್ಟಕ್ಕೆಸೆ;

ಹದಾ ಸುರಿದರೂ ಸುರಿದೀತು ಕರಗೀತು ಒಂದಿನ ಇಳೆ

 

ಅರೆ ಮನಸಿನ ಮಳೆಯಲ್ಲಿ

ಟ್ರಾಫಿಕ್ಕು ಒದ್ದೆಯಾಗುವಾಗ

ಸಪ್ತಸಾಗರಗಳ ಹರಿಗೋಲಲ್ಲಿ ದಾಟಿ ಹೋಗಿ…

ಹಟಾತ್ತನೆ ಚಹಾ ಕುಡಿಯೋ ಹುಕ್ಕಿ

ಇಡ್ಲಿ ವಡೆಗಳ ಗಿಜಿಗುಟ್ಟೋ

ದರ್ಶಿನಿಗಳ ಖಾಲೀತನದೊಳಗೆ

ನಿನ್ನೇ ತುಂಬಿಕೊಳ್ಳುವೆ

 

ರಿಂಗ್ ರೋಡು ಮಧ್ಯ ಒಂದು

ಅಗಲಾಂದ್ರೆ ಅಗಲ ಗುಂಡಿ;

ಇಬ್ಬನಿ ಮಳೆಯ ರೇಷ್ಮೆಯಂತಾ ನೀರು

ಕಪ್ಪೆಯ ಹೆಂಡತಿ ರಾಜಕುಮಾರಿ

ಅಲೆಗಳಲ್ಲಿ ಚಂದಿರನಿಗೊಂದು ಜಳಕ

ಭರ್ರನೆ ಹಾದುಹೋಗುತ್ತೇನೆ ಈ ಕ್ಷಣಗಳ

ನೋಡಲು ಟೈಮಿಲ್ಲ

ಮೈ ಒರೆಸಿಕೋ ಮಾರಾಯ;

ಚಳಿ ಜಾಸ್ತಿ; ನೆಗಡಿಯಾದೀತು