ಆಕಾಶವಾಣಿ ಭದ್ರಾವತಿಯ ತುಂಬ
ಪುಟಾಣಿ ಮನುಶ್ಯರು
ವಾರ್ತೆಗಳ ಓದಿ ಗುಡುಗು ಸಹಿತದ
ಸಾಧಾರಣ ಜೋರು ಮಳೆಗಳ
ಸುರಿಸಿ ನೆನೆದು
ಸ್ಕೂಲು ಮುಗಿದ ಮೇಲೆ
ಕುಂಟಾಪಿಲ್ಲೆಯಾಡುತ್ತಿದ್ದರು

ಮೈದಾನದ ಮೆದುನೆಲದ ಮೇಲೆ
ಮಳೆಗಾಲದ ಮಾಮೂಲು ಮಳೆ
ತನ್ನಿಂತಾನೆ ಹುಟ್ಟಿಬಿಡುವ
ಕವಿತೆ ಸಾಲ ಹಾಗೆ ಹಸಿರು ಪಾಚಿ
ನಡೆದ ಹಾಗೆಲ್ಲಾ ಪಡೆವ
ಕಾವ್ಯಾನುಭೂತಿ

ಫಿಲಿಪ್ಸಿನ ಕರಿ ಪ್ಲಾಸ್ಟಿಕ್ಕುಗಳ
ಒಡೆದು
ಬಂದಾರೆಂದು ಕಾದೆ ಒಂದಿಶ್ಟು ವರ್ಷ

ನೀಲಿ ವ್ಯಾನಿಂದಿಳಿದು
ಎದೆ ತುಂಬ ಕಾಗುಣಿತ
ಗೀಚಿದವಳು
ದೀರ್ಘ ಕೊಂಬುಗಳ ಎಸೆದು
ನಕ್ಕು ಪುಷ್ಪಕ ವಿಮಾನವೇರಿ
ಹೊರಟುಬಿಟ್ಟಳು

ರೇಡಿಯೋ ಅಲ್ಲೆಲ್ಲೋ
ನಿತ್ರಾಣ ಮಲಗಿದೆ
ಕವಿತೆ ಮಾತ್ರ ಕಾಯುತ್ತಿದೆ

Advertisements

ಎಲ್ಲಾ ಅಂದುಕೊಂಡಂತೆಯೇ…
ಡಿಸೆಂಬರಿನಲ್ಲಿ ಅದೇ ಚಳಿ
ನಿನಗೆಂದು ಬರೆದ ಕವಿತೆಗಳಿಗೆ
ಬೆಂಕಿ ಹಚ್ಚುವುದಿಲ್ಲ
ಜಾರಿ ಬರುವ
ನೆನಪುಗಳ ನೆನೆಯದಿರೋ ಯತ್ನ
ಜಾರಿಯಲ್ಲಿದೆ ಅಷ್ಟೆ

ರಸ್ತೆ ಬದಿ ಮರಗಳ ಸಾಲು
ಹಳದಿ ಎಲೆ ಹಾಸಿಗೆ
ಮಬ್ಬು ಕಣ್ಣಲ್ಲಿ
ಸುಳಿವ ಹಳೆಯದೊಂದು ಬಿಂಬ
ಜುಮುರು ಮಳೆಗೆ
ಸುರಿವ ಕಾರಣಗಳೇ ಇರದಾಗ
ಬದುಕಿಬಿಡಲು ಇರಲಿ
ಹಾದಿಯುದ್ದ
ನೆವಗಳ ಕಾರ್ತಿಕ ದೀಪ

ಕಾಗದದ ದೋಣಿ
ಕರಗುವರೆಗಷ್ಟೇ ಪಯಣ
ಸದ್ದಿರದೆ ಮುತ್ತಿಕ್ಕುವ ಗಾಳಿ
ನೀರಲೊಂದು ತಣ್ಣನೆ ಪುಳಕ
ಅಲೆಗಳೆಡೆ ಮೆಲ್ಲುತ್ತಾ
ಪಾನ್ ಫ್ಲೇವರಿನ ಚಾಕಲೇಟು
ಮೆಲ್ಲ ತೇಲಿಬಿಡುವ
ಯಾತರ ಅವಸರ?
ತಲುಪಲು ಗುರಿಯಿರದಾಗ
ಯಾವುದಾದರೇನು ದಡ?

ನವೆಂಬರಿನ ಒಂದು ರಾತ್ರಿ

Posted: ಅಕ್ಟೋಬರ್ 23, 2013 by sukhesh in ನನ್ನ ಕತೆಗಳು
ಟ್ಯಾಗ್ ಗಳು:

“ಅಪ್ಪ ಕತೆ ಅಂದ್ರೇನು ನೀತಿಕತೆ ಅಂದ್ರೇನು?”
“ಕತೆ ಅಂದ್ರೆ ನಿಜ ಅಂತ್ಲೇ ಪುಟ್ಟ. ನೀತಿ ಕತೆ ಅಂದ್ರೆ ಒಂತರಾ ಸುಳ್ಳು ಅಂತ.”

****

ಆ ಬಸ್ಸು ನನ್ನನ್ನ ಆ ಊರಿಗೆ ತಂದು ಇಳಿಸಿದಾಗ ಸೂರ್ಯ ಘಟ್ಟಗಳ ಕೆಳಗೆ ಮರೆಯಾಗಿ ಎರಡು ಕ್ಷಣಗಳು ಕಳೆದಾಗಿತ್ತು. ಸಂಜೆಗತ್ತಲು ಮೆಲ್ಲ ಹರಡುತ್ತಾ ಇತ್ತು. ಜೊತೆಗೆ ಜಗದ ದು:ಖವ ಸುಂದರವಾಗಿ ತೋರಿಸುವಂತೆ ನವೆಂಬರ್ ಮಳೆ ಜಿನುಗುತ್ತಿತ್ತು. “ನೀ ಬರುವಷ್ಟು ಹೊತ್ತಿಗೆ ನಾ ಬಸ್ ಸ್ಟಾಂಡಲ್ಲಿದ್ರೆ ಆಯ್ತಲ್ಲ?” ಅಂತ ಮಾತು ಕೊಟ್ಟಿದ್ದ ಮಾವ ಸುತ್ತೆಲ್ಲೂ ಕಾಣದ್ದರಿಂದ ಅಂವ ಎಷ್ಟು ಹೊತ್ತಿಗೆ ಬರುತ್ತಾನೋ ಅಂತ ಚಿಂತಿಸುತ್ತಲೇ ಮೂರು ಜೊತೆ ಬಟ್ಟೆ, ನಾಲ್ಕು ಪುಸ್ತಕ ತುಂಬಿದ್ದ ಬ್ಯಾಗನ್ನು ಹೆಗಲಿಗೇರಿಸಿ ರಸ್ತೆಬದಿಯ ಚಾದಂಗಡಿ ಎಂಬ ಸೋಗೆ ಗುಡಿಸಲು ಸೇರಿಕೊಂಡೆ.

ಅಂಗಡಿ ಒಳಗೆ ಯಾರೂ ಇದ್ದಂತೆ ಕಾಣಲಿಲ್ಲ. ಒಮ್ಮೆ ಕೆಮ್ಮಿ ಮತ್ತೊಮ್ಮೆ “ಹಲೋ” ಅಂತ ಕೂಗಿದರೂ ಯಾರೂ ಓಗೊಡದೆ ಹೋದ್ದರಿಂದ ಅಲ್ಲೇ ಗಿರಾಕಿಗಳಿಗಾಗಿ ಇಟ್ಟಿದ್ದ ಬೆಂಚಿನ ಮೇಲೆ ಕೂತು ಗೋಡೆಗೊರಗಿದೆ. ಎದುರಿಗೆ ಮಡಿಕೆ ಮದಿಕೆಯಾಗಿ ಚದುರಿ ಹೋಗಿದ್ದ ಹಸಿರು ಕಾಡು. ಆವರಿಸುತ್ತಿದ್ದ ಕತ್ತಲೆಗೆ ಮರ ಗಿಡ ಹುಲ್ಲು ಹುಲಿ ಚಿರತೆಗಳೆಲ್ಲ ಮೆಲ್ಲಗೆ ಒಂದೇ ಮುದ್ದೆಯಾಗುತ್ತಾ ಸುರಿವ ಮಳೆಗೆ ಕರಗಿ ಹೋಗುತ್ತಾವೇನೋ ಅಂತ ಅನ್ನಿಸಿತು. ಆ ಊರಲ್ಲಿ ಅತ್ತೆಯ ದೊಡ್ಡಪ್ಪನ ಸೊಸೆಯ ಅಣ್ಣನ ಮನೆಗೋ ಇನ್ನೆಲ್ಲಿಗೋ ಒಮ್ಮೆ ಹುಲಿ ಬಂದಿತ್ತೆಂದು ಅಮ್ಮ ಹೇಳಿದ ಕತೆ ನೆನಪಾಗಿ ಒಂಚೂರು ನಡುಗಿದೆ. ಕೂತಿದ್ದ ಬೆಂಚಿನ ಮೇಲೆ ಸೀಮೆಸುಣ್ಣದಲ್ಲಿ ಏನೇನೋ ಗೆರೆ ಕೊರೆದಂತಿತ್ತು. ಸೂಕ್ಷ್ಮವಾಗಿ ನೋಡಿದರೆ ಚೌಕಾಬಾರದ ಮನೆಗಳು ಸ್ಪಷ್ಟವಾದವು. ಬಸ್ಸಿನ ನಾಕಿಂಚು ಜಾಗದಲ್ಲಿ ಮಡಚಿಟ್ಟ ಕಾಲುಗಳು ಚಾದಂಗಡಿಯ ವೈಶಾಲ್ಯಕ್ಕೆ ಮೈ ಬಿಚ್ಚುತ್ತಿದ್ದಂತೆ ಹಾಗೇ ಕಣ್ಮುಚ್ಚಿದೆ.

ಯಾರೋ ಹಿಡಿದು ತಳ್ಳಿದಂತಾಗಿ ಧಡಕ್ಕನೆ ಎದ್ದರೆ “ಕಂಡ್ ಕಂಡ್ ಕಡಿ ಎಲ್ಲ ಮಲ್ಕತ್ತಿಯಲ್ಲ ಮಾರಾಯ ನೀನು. ಏಳು ಏಳು” ಅಂತ ಮಾವ ಗದರುತ್ತಿದ್ದ. ಮಬ್ಬುಗತ್ತಲಲ್ಲಿ ಕೈ ಗಡಿಯಾರ ಎಂಟರ ಗಡಿ ದಾಟಿ ಮುಂದೆ ಹೋದ ಹಾಗೆ ಕಾಣಿಸಿತು. “ಅಲ್ಲ ಮಾವ. ನೀ ಬರೋ ಅಷ್ಟು ಹೊತ್ತಿಗೆ ಜೀಪು ಸ್ಟಾರ್ಟು ಮಾಡಿ ಕಾದಿರ್ತೀನಿ ಅನ್ದಿದ್ಯಲ್ಲ. ನಾ ಇಲ್ಲಿ ಕೂತು ಆಗ್ಲೇ ಮೂರು ಗಂಟೆ ಮೇಲಾಯ್ತು”. “ಕೂತಿದ್ದವ್ರು ಯಾರು ಮಾರಾಯ. ಆರಾಮ ಮಲ್ಗಿದ್ದೆ ತಾನೇ? ಮದ್ವೆಮನೆ ಅಂದ್ರೆ ಸಾವ್ರ ಕೆಲಸ ಇರುತ್ತೆ. ನೀ ಏನೋ ಬೆಂಗ್ಳೂರಲ್ಲಿ ರಿಜಿಸ್ಟ್ರು ಮಾಡ್ಕೊಂಡೆ ಅಂದ್ರೆ ಎಲ್ರ್ ಮದ್ವೆನೂ ಹಂಗೇ ಮಾದಕಾಗತ್ತ? ಬೇಗ ಜೀಪು ಹತ್ತು” ಅಂತ ಮಾವ ಗಡಿಬಿಡಿ ಮಾಡಿದ. ಜೀಪು ಮಾವನ ಹಸಿರು ಬಣ್ಣದ ಹೊಳೆಯುವ ಜೀಪಲ್ಲ ಅಂತ ಹೆಡ್ ಲೈಟ್ ಬೆಳಕಲ್ಲೇ ಗೊತ್ತಾಯ್ತು. “ಯಾಕೋ ಮಾವ? ಬೇರೆ ಯಾರ್ದೋ ಜೀಪು ತಂದಿದೀಯ?” ಅಂದೆ. ದೊಡ್ಡ ಶಬ್ದದ ಜೊತೆ ಜೀಪು ಸ್ಟಾರ್ಟ್ ಮಾಡಿದ ಮಾವ ಗೇರ್ ಲಿವರಿನ ಪಕ್ಕದ ಇನ್ನೊಂದು ಲಿವರು ತೋರಿಸಿ “ಈ ಗುಡ್ಡ ಹತ್ತೋಕೆ ನನ್ನ ಜೀಪಿಗೆ ಆಗಲ್ಲ ಕಣಪ್ಪ. ಇಲ್ಲಿಗೆ ಎಕ್ಸ್ಟ್ರಾ ಗೇರು ಎಕ್ಸ್ಟ್ರಾ ಬ್ರೇಕು ಮಿಲಿಟರಿ ಜೀಪಿನ ತರ ಗಾಡಿಗಳೇ ಬೇಕು. ನೀ ಈ ಊರಿಗೆ ಇಲ್ಲೀ ತಂಕ ಬಂದಿಲ್ಲ. ನೀನೇನು ನಿಮ್ಮ ಮನೆಯಿಂದ್ಲೇ ಯಾರೂ ಬಂದಿಲ್ಲ. ಸಣ್ಣ ಪುಟ್ಟ ವಿಷ್ಯಾನೆ ದೊಡ್ಡ ಮಾಡೋದು ಅಂದ್ರೆ ನಿಪ್ಪಂಗೆ ಅದೇನು ಕುಶೀನೋ ಗೊತ್ತಿಲ್ಲ. ಇಲ್ಲಾಂದ್ರೆ ಒಂದು ಜಗಳಾನ ಇಪ್ಪತ್ತೈದು ವರ್ಷ ಯಾರಾದ್ರು ನೆನಪಲ್ಲಿ ಇಟ್ಕೊತಾರ ?” ಅಂತ ಹಳೇ ಪುರಾಣದ ಮುಚ್ಚಳ ತೆಗೆದ. ನನಗೆ ಆ ಮಾತು ಬೇಡವಾಗಿತ್ತು. “ಮಾವ ರೋಡು ತುಂಬಾ ಕೆಸರಾಗಿದೆ. ಟೈರು ಜಾರುತ್ತೇನೋ” ಅಂದೆ. ಮಾವ ನಕ್ಕು “ಈ ಊರಲ್ಲಿ ಎಲ್ಲಾ ಜಾರೊದೆ. ಇನ್ನೂ ನೀ ದೊಡ್ಡಮ್ಮನ ಮನೆ ನೋಡಿಲ್ಲ. ಅವ್ರ್ ಮನೆ ಬಾಗ್ಲಿಗೆ ಹೋಗೋಷ್ಟು ಹೊತ್ತಿಗೆ ಏನೇನು ಜಾರುತ್ತೆ ಅಂತ ಗೊತ್ತಾಗುತ್ತೆ ತಡಿ” ಅಂದ. ನನಗೆ ಯಾವುದೋ ಒಂದು ಸಂಬಂಧದ ನಂಟು ಹಿಡಿದು ಹೋದರೆ ಅಜ್ಜಿ ಆಗುವ ವ್ರದ್ಧೆಯ ಬಗ್ಗೆಯೂ ಅದಕ್ಕೂ ಹೆಚ್ಚಾಗಿ ಆ ವ್ರದ್ಧೆಯ ತಲೆ ತಿರುಕ ಪತಿ ಅರ್ಥಾತ್ ನನ್ನ ಅಜ್ಜನ ಬಗ್ಗೆಯೂ ಅದಕ್ಕೂ ಹೆಚ್ಚಾಗಿ ಆ ತಲೆ ತಿರುಕ ಅಜ್ಜನ ಮನೆಯ ಬಗ್ಗೆಯೂ ಬಹಳವಾಗಿ ಕೇಳಿದ್ದೆ. ಒಮ್ಮೆಯೂ ನೋಡಿರದಿದ್ದರೂ ಸಾವಿರ ಬಾರಿ ಕೇಳಿದ ಆ ಮನೆ ಮತ್ತು ಆ ಮನೆಯ ಜನರ ಕತೆಯನ್ನು ಮಾವ ಮತ್ತೆ ಶುರು ಮಾಡಿದ. ನಾನು ನಿದ್ರೆಯ ನೆವ ಹೇಳಿ ಕಣ್ಣು ಮುಚ್ಚಿದೆ.

ಜೀಪು ಯಾವುದೋ ಗುಂಡಿಗೆ ಇಳಿದು ಎದ್ದಿತೇನೋ. ತಟ್ಟನೆ ಎಚ್ಚರವಾಯ್ತು. ಕಣ್ಣುಜ್ಜಿಕೊಂಡು ನೋಡಿದರೂ ಸುತ್ತಾ ಕತ್ತಲು. ಸದ್ದನ್ನೂ ಸಹಾ ಬಡಿದು ಬಾಯಿಗೆ ಹಾಕಿಕೊಂಡಂತ ಕತ್ತಲು. ಕತ್ತಲೆಗೆ ಹೆದರಬೇಕೋ ಮೌನಕ್ಕೆ ಹೆದರಬೇಕೋ ಒಂದು ಕ್ಷಣ ತಿಳಿಯಲಿಲ್ಲ. ಮಾವ ಮಾತನಾಡದೆ ರಟ್ಟೆ ಹಿಡಿದು ಎಳೆದುಕೊಂಡು ಹೋಗುವವನಂತೆ ಮುಂದೆ ನಡೆದ. ಕಾಡ ನಡುವೆ ಸ್ವಲ್ಪ ದೂರ ನಡೆದ ಮೇಲೆ ಚೂರು ಬೆಳಕಾದಂತೆ ಅನ್ನಿಸಿತು. ಬಹುಷಃ ಗದ್ದೆ ಇರಬೇಕು. ಅಂಚಿನ ಮೇಲೆ ನಡೆವಾಗ ಸೋನೆ ಮಳೆಗೆ ನೆಂದ ಹುಲ್ಲಿನ ಗರಿಗಳು ಪಾದವನ್ನ ಮೃದುವಾಗಿ ಸವರುತ್ತಿರುವಂತೆ ಭಾಸವಾಗುತ್ತಿತ್ತು. ಭಯವೋ ಖುಷಿಯೋ ಕನಸೋ ನನಸೋ ತಿಳಿಯದೆ ಸುಮ್ಮನೆ ನಡೆಯುತ್ತಾ ಇದ್ದೆ.

ಒಂದೆರಡು ತಾಸೋ ಅಥವಾ ಒಂದೆರಡು ನಿಮಿಷವೋ ನಡೆದಿರಬೇಕು. ಮನೆ ಬಂತು ಎಂಬಂತೆ ಮಾವ ನಿಂತ. ನಾನೂ ನಿಂತೆ. ಮಾವ ಆಕಾಶಕ್ಕೆ ಕೈ ತೋರಿದ. ಕವಿದ ಮೋಡಗಳ ನಡುವೆ ಒಂದು ಸಕ್ಷತ್ರವೂ ಇರಲಿಲ್ಲ. ಆದರೆ ಕಪ್ಪು ಮೋಡಗಳಲ್ಲೇ ಕೆಲವೊಂದು ಹೆಚ್ಚು ಗಾಢವಾಗಿಯೂ ಕೆಲವೊಂದು ಇನ್ನೂ ಹೆಚ್ಚು ಗಾಢವಾಗಿಯೂ ಮತ್ತೊಂದು ಮತ್ತೂ ಗಾಢವಾಗಿಯೂ ಕಂಡಿತು. ಇಷ್ಟು ದಟ್ಟ ಮೋಡಗಳು ಕವಿದರೂ ಮಳೆ ಮಾತ್ರ ಬರಿದೆ ಜಿನುಗುತ್ತಿದೆಯಲ್ಲಾ ಅಂತ ಆಶ್ಚರ್ಯವಾಯ್ತು.

“ಇಲ್ಲೇ ಮೇಲೆ ಹತ್ಬೇಕು ನೋಡು. ಜಾರೋದು ಅಂದ್ರೆ ಏನು ಅಂತ ಇಲ್ಲಿ ಗೊತ್ತಾಗುತ್ತೆ”. ಮಾವ ಗಂಭೀರವಾಗಿದ್ದಂತೆ ಕಂಡಿತು. ಕತ್ತಲೆಯಲ್ಲೇ ಕಣ್ಣರಳಿಸಿ ನೋಡಿದೆ. ಮೆಲ್ಲಗೆ ನಾಗಲೋಕಕ್ಕೆ ಇಳಿವ ಮೆಟ್ಟಿಲುಗಳ ಹಾಗೆ ಗುಡ್ಡದ ಕಲ್ಲಲ್ಲಿ ಕೆತ್ತಿದ ಮೆಟ್ಟಿಲುಗಳು ಕಂಡವು.

ಅದೊಂದು ಪುಟ್ಟ ಗುಡ್ಡದ ಮೇಲಿನ ಮನೆ. ಇನ್ನೂ ಸರಿಯಾಗಿ ಹೇಳಬೇಕಾದರೆ ಆ ಮನೆ ಕಟ್ಟಲಿ ಎಂದೇ ಆ ಗುಡ್ಡ ಭೂಮಿಯ ಅಂತರಾಳದಲ್ಲೆಲ್ಲಿಂದಲೋ ಮೇಲೆ ಎದ್ದಂತಿತ್ತು. ಭೂಶಾಸ್ತ್ರವನ್ನೇನು ನಾ ಓದಿಲ್ಲದಿದ್ದರೂ ಆ ಗುಡ್ಡದ ಮಣ್ಣು ಈ ನೆಲದ್ದಲ್ಲವೇ ಅಲ್ಲ ಅಂತ ಅನ್ನಿಸಿತು. ನಾ ಕೇಳಿದ ಕತೆಗಳ ಪ್ರಕಾರ ಈ ಗುಡ್ಡದಿಂದ ಅರ್ಧ ಮೈಲು ದೂರದಲ್ಲೆಲ್ಲೋ ಇನ್ನೊಂದು ಇಷ್ಟೇ ಎತ್ತರದ ಗುದ್ದವಿದೆ. ಎರಡು ಗುಡ್ಡಗಳ ನಡುವೆ ಸಣ್ಣಕ್ಕೆ ಹರಿವ ತೊರೆಗೆ ಸೀತಾ ನದಿ ಅನ್ನೋ ದೊಡ್ಡ ಹೆಸರಿದೆ. ಈ ಎರಡು ಗುಡ್ಡಗಳ ನಡುವೆ ಅಜ್ಜನ ಅಡಿಕೆ ತೋಟ ಮಲಗಿದೆ. ಈ ಗುಡ್ಡದ ಮೇಲೆ ಅಂಗೈ ಅಗಲದಷ್ಟೇ ಜಾಗವಿದ್ದರೂ ಮತ್ತು ಆ ಜಾಗದಷ್ಟಕ್ಕೂ ಆ ಮನೆಯೇ ಹರಡಿದ್ದರೂ ಸಹ ಅದೆಲ್ಲಿಂದಲೋ ಒಂದು ಸಣ್ಣ ತೊರೆ ಹುಟ್ಟಿ ಗುಡ್ಡದಂಚಲ್ಲೇ ಹರಿಯುತ್ತಾ ಅಲ್ಲಲ್ಲಿ ಜಲಪಾತದ ಭ್ರಮೆ ಹುಟ್ಟಿಸುತ್ತಾ ಮೆಲ್ಲಗೆ ಹರಿದು ಸೀತಾನದಿ ಸೇರುತ್ತದೆ.

ಸಂಜೆಯಿಂದ ಜಿನುಗಿದ ಮಳೆಗೋ ಏನೋ ಮೆಟ್ಟಿಲುಗಳು ಜಾರುತ್ತಿದ್ದವು. ಮನೆಗೆ ಅಂತ ಬಂದವರು ಸೀದಾ ಸ್ವರ್ಗ ಸೇರದಿರಲಿ ಅಂತ ಅಜ್ಜ ಮೆಟ್ಟಿಲುಗಳ ಒಂದು ಕಡೆಗೆ ಕಟ್ಟಿಸಿದ್ದ ಕಬ್ಬಿಣದ ತಡೆಗೋಡೆಯಂತಾ  ಬೇಲಿ ಇರದಿದ್ದರೆ ಈ ಜಾರಿಕೆಯ ಮೆಟ್ಟಿಲುಗಳನ್ನು ಏರುವುದು ಬಹುಷಃ ಸಾಧ್ಯವೇ ಇರಲಿಲ್ಲವೇನೋ. ಹಾಗೂ ಹೀಗೂ ಜಾರುತ್ತಾ ಏರುತ್ತಾ ಮಾವನ “ನಿಧಾನ ಮಾಣಿ.”, “ಹುಷಾರು. ಜಾರುತ್ತೆ” ಇತ್ಯಾದಿ ಮಾತುಗಳ ಮಧ್ಯೆ ಒಂದರ್ಧ ಗಂಟೆ ಹತ್ತಿರ ಬಹುದೇನೋ ಮೆಟ್ಟಿಲುಗಳು ನಿಂತುಹೋದವು. ಆದರೆ ಅಂದುಕೊಂಡ ಹಾಗೆ ಸಪಾಟು ನೆಲ ಸಿಗಲಿಲ್ಲ. ಬದಲಾಗಿ ಗುಡ್ಡದ ಅಂಚಿಗೇನೆ ಸ್ವಲ್ಪವೂ ಜಾಗ ಬಿಡದೇ ಕಲ್ಲಿನಲ್ಲಿ ಕಟ್ಟಿದ್ದ ಪಾಚಿ ಕಟ್ಟಿದ ಗೋಡೆ, ಗೋಡೆಯನ್ನು ಅಪ್ಪಿ ಕುಳಿತಿದ್ದ ಕಬ್ಬಿಣದ ಏಣಿ ಮೇಲೆಲ್ಲೋ ಬೆಳಗುತ್ತಿದ್ದ ಪೆಟ್ರೋಮ್ಯಾಕ್ಷ್ ಬೆಳಕಲ್ಲಿ ಅಸ್ಪಷ್ಟವಾಗಿ ಕಂಡಿತು.

“ಎಲ್ಲಾದ್ರು ಬಾಗ್ಲೇ ಇಲ್ಲದ್ ಮನೆ ನೋಡಿದ್ಯಾ? ಇದ್ಕೇ ಎಲ್ಲಾ ನಿಮ್ಮಜನ್ನ ಹುಚ್ಚ ಅನ್ನೋದು. ಬಾ. ಮೊದ್ಲು ನೀನೇ ಮೇಲೆ ಹತ್ತು. ಆ ಏಣಿ ಪೂರ್ತಿ ಸರಿ ಇಲ್ಲ. ಜಾಸ್ತಿ ಭಾರ ಬಿಡ್ಬೇಡ. ಚೂರು ಗೋಡೆ ಸಪೋರ್ಟು ತಗೊಂಡು ನಿಧಾನ ಹತ್ತು.” ಅಂದ.

ಬಾಗಿಲೇ ಇಲ್ಲದ ಮನೆ ಅಂತ ಮೊದಲೇ ಗೊತ್ತಿತ್ತು. ಆದರೆ ಈ ರೀತಿ ಕಾಲು ಜಾರಿದರೆ ಕೈಲಾಸವೇ ಸರಿ ಅನ್ನುವಂತಾ ಜಾಗ ಅಂತ ಗೊತ್ತಿರಲಿಲ್ಲ. ತಣ್ಣನೆ ಬೀಸುತ್ತಿದ್ದ ಗಾಳಿ, ಹನಿಯುತ್ತಿದ್ದ ಮಳೆಯ ಮಧ್ಯೆ ಸಣ್ಣಗೆ ಮೈ ಬೆವರಿತು. ಆದರೆ ಬೇರೆ ದಾರಿಯೇ ಇಲ್ಲ. ಮಾವನ ಹೆಗಲಿನ ಆಸರೆಯಲ್ಲಿ ಬಾಗಿ ತಣ್ಣಗಿನ, ತುಕ್ಕು ಹಿಡಿದು ಮುಕ್ಕಾಗಿದ್ದ ಏಣಿಗೆ ಕೈ ಚಾಚಿದೆ. ಗೋಡೆಗೆ ಹೊಡೆದಿದ್ದ ಏಣಿಯ ಬಲ ತುದಿ ಸಡಿಲವಾಗಿತ್ತೋ ಏನೋ, ಹೆಜ್ಜೆ ಎತ್ತಿ ಇಡುವಾಗೆಲ್ಲಾ ಏಣಿ ಗೋಡೆಯಿಂದ ತುಸು ಹೊರಬಂದು ಜೀವ ಬಾಯಿಗೆ ತರಿಸುತ್ತಿತ್ತು. ಜೊತೆಗೆ ಜಿನುಗು ಮಳೆಯ ನೀರು ಬೇರೆ. ಏಣಿಯ ತುತ್ತ ತುದಿ ಸೇರುವಷ್ಟರಲ್ಲಿ ನನ್ನ ಭಾರಕ್ಕೆ ಏಣಿ ಇನ್ನೇನು ಗೋಡೆಯಿಂದ ಕಿತ್ತು ಬರುವಂತೆ ಹೊಯ್ದಾಡಿತು. ಗಾಬರಿಯಿಂದ ಬಲಗೈ ಬೀಸಿ ಗೋಡೆಯ ತುದಿ ಹಿಡಿದುಕೊಂಡೆ. ಎರಡು ನಿಮಿಷ ಸುಧಾರಿಸಿಕೊಂಡು ಆಮೇಲೆ ಮೆಲ್ಲಗೆ ಎರಡು ಕೈಗಳಲ್ಲೂ ತಾರಸಿಯ ಅಂಚು ಹಿಡಿದು ತೆವಳುವವನಂತೆ ಮನೆಯ ಮೇಲೆ ತಲುಪಿದೆ.

ನೆಟ್ಟಗೆ ನಿಂತ ಮನೆಯೊಂದನ್ನು ಕಿತ್ತು ಬೆನ್ನಿನ ಮೇಲೆ ಮಲಗಿಸಿದ ಹಾಗೆ ತಾರಸಿಯ ಮೇಲೆ ಒಂದು ಕಿಟಕಿ, ಕಿಟಕಿಯ ಪಕ್ಕ ಬಾಗಿಲು. ಮುಚ್ಚಿದ್ದ ಎರಡರ ಸೀಳುಗಳಿಂದಲೂ ಬೆಳಕಿನ ಒಂಟಿ ಕಿರಣಗಳು ಆಕಾಶಕ್ಕೆ ಚಿಮ್ಮುತ್ತಿದ್ದವು. ಒಳಗಿನಿಂದ ಮಾತು, ನಗು, ಯಾವುದೋ ಮಕ್ಕಳ ಅಳು ಜಗಳ, ಕರಿದ ತಿಂಡಿಯ ಘಮ ಇತ್ಯಾದಿ ಇತ್ಯಾದಿ ಸೋರಿ ತೊರೆಯಲ್ಲಿ ಕರಗಿ ಗುಡ್ಡದಂಚಲ್ಲಿ ಸಾಗಿ ಸೀತಾನದಿ ಸೇರುತ್ತಿದ್ದವು. ಬಾಗಿಲಲ್ಲದ ಬಾಗಿಲನ್ನು ತಟ್ಟಬೇಕೋ, ತಟ್ಟಬಹುದೋ ತಿಳಿಯದೇ ಕಿಂಕರ್ತವ್ಯ ಮೂಢನಂತೆ ಮಾವ ಬರುವುದನ್ನೇ ಕಾಯುತ್ತಾ ಕುಳಿತೆ.

(ಮುಂದುವರೆಯುವುದು)

ಗೊಂದಲ

Posted: ಅಕ್ಟೋಬರ್ 3, 2013 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ಬಿಡಿಸಿದಂತೆಲ್ಲಾ ಬಣ್ಣ
ಕಳೆದುಕೊಳ್ಳೋ ಚಿತ್ರಕ್ಕೆ
ಗಿರಾಕಿ ಹುಡುಕೋದಾದ್ರೂ ಹೇಗೆ?

ಗಾಂಧಿ ಜಯಂತಿಯ ದಿನ
ದೂರದ ಕಾವೇರಿ ನಮ್ಮನೆ
ನಲ್ಲಿಯಲ್ಲಿ ಹರಿವ ಬಗೆಗೆ
ಎರಡು ಕ್ಷಣ ಅಚ್ಚರಿಪಟ್ಟೆ

ಶ್ರೀನಗರದಲ್ಲೆಲ್ಲೋ ಒಮ್ಮೆ
ಕಿವಿಗೆ ಹಳೇ ರೇಡಿಯೋ ಹಚ್ಚಿ
ಯವ್ವನಕ್ಕೆ ಲಿಂಕು ಸಿಕ್ಕಂತೆ
ಕಣ್ಮುಚ್ಚಿ ಅಗಾಧ ಗದ್ದಲದ ನಡುವೆ
ತನ್ಮಯನಾದ ಮುದುಕ
ಸುಕ್ಕು ರೆಪ್ಪೆಯ ಕೆಳಗೆ ಕಪ್ಪು ಚುಕ್ಕಿಗಳು
ನೀಲಿ ನಕ್ಷತ್ರಗಳು
ಹಸುರಾಗುವ ಕ್ಷಣದಲ್ಲಿ
ಹಳದಿ ಮೋಡಗಳಿಂದ ಬಣ್ಣರಹಿತ ಮಳೆ
ಮತ್ತೀಗ ಹಠಾತ್ ಗೊಲಿಬಾರಿನಂತೆ
ಚದುರಿ ಬಿಡೋ ಮಂದಿ ಮತ್ತು ಮೋಡಗಳು

ಕಟ್ಟಿಗೆ ಒಲೆ ಪಕ್ಕ ಹಳೆ ಚಾದರ
ರಸ್ತೆ ಬದಿ ಆರಾಮ ನಿದ್ದೆ
ಕನೆಕ್ಟ್ ಆಗದ ಇಂಟರ್ನೆಟ್ಟು
ಮೈ ನಡುಗಿಸೋ ಏಸಿ
ನಿದ್ರೆ ಸುಳಿಯದ ವೇಳೆ
ಹುಡುಕುವ ಅಂದರೆ
ಕಳೆದದ್ದೇನು ಅಂತಲೇ ಗೊಂದಲ

ಮೋಡ ಹಡಗು ಮಳೆ

Posted: ಜೂನ್ 10, 2013 by sukhesh in ನನ್ನ ಕತೆಗಳು
ಟ್ಯಾಗ್ ಗಳು:,

ಓಡುತ್ತೇನೆ

ಹಸಿರು ವನ ಹಳದಿ ಅಬ್ಬಲಿಗೆ

ಹೂಗಳ ನಡುವೆ

ಸುರಿದ ಪ್ರೀತಿ ಇಬ್ಬನಿ ಹನಿಗಳ ಗಲ್ಲ

ಸವರುತ್ತಾ

ತಣ್ಣನೆಯ ಅಚ್ಚರಿಯಂತಾ

ಪ್ರಪಾತದಂಚು…

ಗಕ್ಕನೆ ಗಾಳಿಯಲ್ಲಿ ತೇಲುತ್ತಾ

ಬೀಳುವಾಗ

ಜೇಬಿಂದ ಜಾರುವ ಕವಿಸಮಯಗಳು

ಸಾವಿಗಂಜಿ ನಡುಗಿ

ಒದೆದೆಬ್ಬಿಸಿದಂತಾ ಎಚ್ಚರ

ಉದಾಸಿನ ತಿರುಗುವ ಫ್ಯಾನಿಗೆ

ಸೊಳ್ಳೆಗಳು ಹೆದರುವುದಿಲ್ಲ

ಕತ್ತಲು ತೊಳೆದಿಟ್ಟ ಖಾಲಿ ಆಕಾಶ

ಬೆದರಿ ಬೆವೆತ ಕಪ್ಪು ಬಿಳಿ ಮೋಡಗಳು

ಅರ್ಧರಾತ್ರಿಯ ಅರ್ಥವಿಲ್ಲದ

ಖಾಲಿಪೀಲಿ ಡಾಂಬರು ರಸ್ತೆ

ನಡುವಲ್ಲಿ ಮೆಲ್ಲಗೆ ಕರಗಿ ಕಾಣೆಯಾಗಬೇಕು

ತುಂಬಿಕೊಂಡ ನಿರ್ವಾತವನ್ನು

ಖಾಲಿದೋಸೆಗಳಿಗೆ ಹಂಚಿಬಿಡಬೇಕು

 

ತುಂಬಿಕೊಳ್ಳಬೇಡಿ

ಮೋಡಗಳನ್ನುಹಡಗುಗಳನ್ನು

ಮತ್ತು

ಅರ್ಧರಾತ್ರಿಯ ಕನಸುಗಳನ್ನು

ಮೇ ಮಳೆ

ಮಿಂದ ಇಳೆ

ತೊಳೆದು ಕೊಳೆ

 

ಅಂತ ಪ್ರಾಸಬದ್ದ ಬರೆದು

ಕುಳಿತೆ

ಆಯಾಸ ಒಂದಿಷ್ಟು ತಲೆನೋವು

ಈ ಮಳೆಯದೊಂದು ನಿಲ್ಲದ

ಗೋಳು

 

ಹೀಗೆಲ್ಲ ಅರ್ಥಹೀನ ಸುರಿವಾಗ

ಫುಟ್ಪಾತ್ ಚಾಕಲೇಟು ಕವರು

ಹಳೆ ಪ್ರಜಾವಾಣಿ ಪೇಪರುಗಳ

ಜೊತೆ ತೊಳೆದು ಬರುವ

ನೆರಳುಗಳು

ಹನಿಗಳ ಅಬ್ಬರಕ್ಕೆ

ಹೈ ಫೈ ಗಾಜು ಮಬ್ಬಾಗುತ್ತದೆ

ಇದ್ದಕ್ಕಿದ್ದಂತೆ ಪುರಾತನವಾಗುವ

ನಾನು ಗಾಜಿನಾಚೆ

ಚಲಿಸುವ ಬಿಂಬಗಳ ದಿಟ್ಟಿಸುತ್ತೇನೆ

 

ಸಂಜೆಮಳೆಯ ಈ ದಿನಗಳಲ್ಲಿ

ನಿನ್ನ

ಕೇಶರಾಶಿಯ ವಿಹ್ವಲತೆಗೆ

ಪಡುವಣದ ಗಾಳಿಯೇ ಕಾರಣವಿರಬೇಕು

ನಾಲ್ಕು ದಿಕ್ಕಲ್ಲೂ

ದಿಕ್ಕಾಪಾಲು ಹನಿಗಳು

ಭಾಷ್ಪೀಕರಣದ ಕತೆ ಹೇಳಿದ ಟೀಚರಾದರೂ ಎಲ್ಲಿ?

 

ಕಿಟಕಿಯಲ್ಲಿ ನೆಂದ

ಗುಲ್ಮೊಹರುಗಳ ಸಾಲು

ದಿಗಂತದಲ್ಲಿ

ಮಿಂಚಿನ ಕೋಲು

ಮೋಡದ ಮೇಲೆಲ್ಲೋ

ನೀನೇ ಚಲಿಸಿ ಒಮ್ಮೆ ನಕ್ಕು…

ಬೆಳೆದು ನಿಂತ ಅಂತರಕ್ಕೆ ನಿಟ್ಟುಸಿರು

ಊರ ತುಂಬ ಕವಿತೆಯೆಂಬ ಮಳೆ ಕೊಯಿಲು

ಸಂಜೆ ತಣ್ಣನೆ ಗಾಳಿಯೆಡೆ
ಸುಮ್ಮನೆ ನಡೆವಾಗಲೂ
ಕೈ ಚಾಚಿ
ನಕ್ಷತ್ರಗಳ ಹಿಡಿವ ನಕ್ಷತ್ರ
ನಕ್ಷತ್ರಗಳ್ಯಾಕೇ  ನಿನಗೆ?

ಚಳಿಗಾಲದ ಕೊನೆಯ ಸಂಜೆ
ಬೆಪ್ಪು ಮುಗಿಲ
ಹಿಂದೊಂದು
ತವಕಿತ ಮಿಂಚು ಮಳೆ
ಇನ್ನೇನು ನಿನ್ನ ರೆಪ್ಪೆಗಳ ಒಪ್ಪಿಗೆ ಸಾಕು
ಸುರಿದುಬಿಡಲು
ನಾ ಕರಗಿಬಿಡಲು

ಕಾಫಿ ಹೂಗಳ ಘಮಕ್ಕೆ
ತುಸು ನೆಂದ ಬೆಳದಿಂಗಳು
ಬೆರೆಸಿ
ತಲೆ ಒರೆಸಿ ತಂದು
ಮುಡಿಯಲ್ಲಿಟ್ಟರೆ
ನಿನ್ನ ಕಂಗಳ ಮುದ್ದಿಗೆ
ಒಂದಿಷ್ಟು ಅಸೂಯೆ

ಜಾಸ್ತಿ ನೆನೆಯಬೇಡವೆ ಹುಡುಗಿ
ಪ್ರೀತಿಯೆಂದರೆ ಹಾಗೇ
ಮಾಗಿಯ
ಕೊರೆವ ಚಳಿ ಮಳೆ
ತಿಳಿಯಲೇ ಬೇಡ
ಪೆಂಡ್ಯುಲಂ ನದಿಯ ಅಲೆ