Posts Tagged ‘childhood memories’

ಅರೆ ನಿದ್ರೆ ಅರೆ ಎಚ್ಚರ
ನೇರಳೆ ಹಣ್ಣು ತಿಂದ ಕನಸು
ಧಡ್ ಎಂದು ಕಂಬಿಗೆ ತಲೆ ತಾಗಿದರೆ
ಗೊತ್ತಿಲ್ಲದೂರಲ್ಲಿ ಪಲಾಯನವಾದಿ ಪ್ರೈವೇಟ್ ಬಸ್ಸು.

ಬೀದಿ ಬದಿ ಮನೆಯಲ್ಲಿ
ಮಗು ಅಳುತ್ತಲೇ ಇರಬೇಕಂತಿಲ್ಲ.
ನದಿಗುಂಟ ನಡೆವಾಗ
ಕೆಂಪುಕಲ್ಲುಗಳನ್ನೇ ಏಕೆ ಆಯುತ್ತೀಯ?

ಹತ್ತಿ ಇಳಿದು ಸುತ್ತಿ ನುಲಿದು
ಸಾಗುವಾಗ ಎಡಕ್ಕೊಮ್ಮೆ ನೋಡು
ದಾರಿ ಇನ್ನೂ ಅಲ್ಲೇ ಸುತ್ತುತ್ತಿದೆ.
ದೂರದಲ್ಲಿ, ಮೈಲು ದೂರದಲ್ಲಿ
ನಡೆಯುತ್ತಿರುವುದು ನೀನೆ!

ಇಕೋ, ಈ ತಿರುವು ತಿರುಗುತ್ತಲೇ
ಮುಗಿಯುತ್ತೆ ಹಾಡ್ಯ
ನಿರೀಕ್ಷಿತ ಅಪಘಾತದಂತೆ ಸಿಕ್ಕುತ್ತೆ
ನಿಮ್ಮಜ್ಜನ ಊರಿನ ಏಕಾಕಿ ಬಸ್ ಸ್ಟಾಪು.
ಪೆಟ್ಟಿಗೆ ಅಂಗಡಿಯಲ್ಲಿ ಮೂವತ್ತರ ಕನ್ಯೆ
ಸಾಲು ಬಾಟಲಿಗಳಲ್ಲಿ ಮೂರೇ ತಿಂಗಳು ಹಳೆಯ
ಶೇಂಗಾ ಹುರಿಗಡ್ಲೆ ಚಕ್ಕುಲಿ ಕೋಡುಬಳೆ.

ಮನೆ ತುಂಬಾ ಮಕ್ಕಳು ಮತ್ತು
ಕಂ ಎನ್ನುವ ಹಳೇ ಸುಧಾ ತರಂಗ ಕರ್ಮವೀರ
ಅಗಲ ಕಣ್ಣು ಚಿಕ್ಕಿಯ ಅಭಿಜ್ಞಾನ ಶಾಕುಂತಲ.
ಅಟ್ಟದ ಮೇಲಿನ ಟ್ರಂಕು ತುಂಬಾ
ಅಮ್ಮ ಆಡಿ ಬಿಟ್ಟ ಮಣಿ ಗೊಂಬೆ.
ಎಂದೂ ನೋಡಿರದ ಅಜ್ಜನ ಹಾರ್ಮೋನಿಯಮ್ಮು
ಮಾಸಿದ ಯಕ್ಷಗಾನದ ಕಿರೀಟ.

ಸಿಗ್ನಲ್ಲುಗಳಿಲ್ಲದ ಈ ಊರಲ್ಲಿ
ಯರ್ರಾಬಿರ್ರಿ ನುಗ್ಗುತ್ತದೆ ಮನಸ್ಸು.
ಮನಸೂ ಒಂದು ಪ್ರೈವೇಟ್ ಬಸ್ಸು.

ಎಲ್ಲ ಪ್ರಶ್ನೆಗಳಿಗೂ ನ್ಯೂಟನ್ನು
ಉತ್ತರಿಸಲಾರ ಕಣೆ ನವ್ವಾಲೆ ಹುಡುಗಿ.
ಕೆಲವು ಪ್ರಶ್ನೆಗಳಿಗೆ ಉತ್ತರವೇ ಇರುವುದಿಲ್ಲ.

ನಿನ್ನೆ ಇಲ್ಲೇ ಪಕ್ಕದಲ್ಲಿ
ಉಸಿರು ನನ್ನದೋ ಏನೋ
ಎಂಬಂತೆಲ್ಲ ಇದ್ದವರೆಲ್ಲ
ಇಂದು ಮೈಲು ದೂರ
ಸರಿದು ಹೋಗಿರುವುದಕ್ಕೆ ಯಾವ
ಫೋರ್ಸು ಕಾರಣ ನ್ಯೂಟನ್ ಕೇಳಿ ಹೇಳುವೆಯ?

ಒಂದನೇ ಕ್ಲಾಸಿನ ಟೀಚರಿಗೆ
ಒಂದು ತಲೆಯಾದರೆ ಎರಡನೇ
ಕ್ಲಾಸಿನ ಟೀಚರಿಗೇನು ಎರಡು ತಲೆಯಿರುವುದಿಲ್ಲ.
ಹಾಗಂತ ಇಲ್ಲಿ ಐನ್ ಸ್ಟಯ್ನ್ ತಪ್ಪೇನು ಇಲ್ಲ.
ಅಂತ ನಾ ಹೇಳಿದರೆ
ಸಿಡುಕುತ್ತಾರಲ್ಲೇ ಈ ಜನ.
ಇವರಿಗೆ ನಗುವುದು ಗೊತ್ತಿಲ್ಲದ್ದಕ್ಕೆ
ಇನ್ನೂ ಯಾವ ಥಿಯರಿಯೂ
ಕಾರಣ ಕೊಟ್ಟಿಲ್ಲ.

ಇನ್ನೂ ಗುಲ್ಮೊಹರುಗಳು ನಿಂತಿವೆಯ?
ಗೊತ್ತಿಲ್ಲ. ಬಹುಷಃ ಇರಲಾರವು.
ಇರದ, ಇದೆಯೋ ಇಲ್ಲವೋ ಗೊತ್ತಿರದವುಗಳಿಗೂ
ನೆರಳಿರುವುದು, ನೆರಳಲ್ಲಿ ನಲಿವಿರುವುದು,
ನಲಿವಲ್ಲೂ ನೋವಿರುವುದು
ಅಚ್ಚರಿಯೇ ಅಲ್ಲವೆ?
ಹಾಗಂತ ನಾ ಹೇಳಿದರೆ ನಾಳೆಯೇ
ಬಂದಾರು ಕ್ಯಾಮರಾಮನ್ನು ಮತ್ತು
ಜೊತೆಗೆ ರಿಪೋರ್ಟರು.

ಹೇಗೆ ಹೇಳಲಿ ಗೆಳತಿ ಇವರಿಗೆ
ನೋವೂ ಚಂದ ನಲಿವೂ ಚಂದ
ಅಂತೆಲ್ಲ ಕಂತೆ ಪುರಾಣಗಳ?

ಇಲ್ಲ ಕಣೆ ಹುಡುಗಿ,
ಇಲ್ಲಿ ನಾನು ನೀನು ಅಷ್ಟೇ ಸರಿ.
ಬಾ ಮತ್ತೆ ಸಣ್ಣ ಸಣ್ಣದ್ದಕ್ಕೆ
ಬೆಕ್ಕಿನ ಮರಿಗಳಂತೆ ಕಿತ್ತಾಡೋಣ.
ನೀ ಮತ್ತದೇ ಕೆಟ್ಟದೇ ಸ್ವರದಲ್ಲಿ
ನವ್ವಾಲೆ ಬಂತಪ್ಪ ನವ್ವಾಲೆ ಹಾಡು.
ಟೊಮೋಟೋ ಬಿಡುವುದು ಗಿಡದಲ್ಲೋ
ಬಳ್ಳಿಯಲ್ಲೋ ಅಂತ ಇನ್ನೂ
ನಿನಗೆ ಗೊತ್ತಿರಲಿಕ್ಕಿಲ್ಲ.
ಇನ್ನೂ ಸಮಯವಿದೆ ಬಾ
ಮತ್ತದನ್ನೇ ಮಾತಾಡೋಣ.

ಹೇಳಿ ಬಿಡುತ್ತೇನೆ ಕೇಳು ಗೆಳತಿ.
ತಲೆಗೆ ತಲೆ ಡಿಕ್ಕಿಯಾದದ್ದು
ಆಕಸ್ಮಿಕವೇ ಇರಬಹುದು
ತುಟಿಗೆ ತುಟಿ ತೆಕ್ಕೆಯಾದದ್ದು
ಖಂಡಿತಾ ಅಲ್ಲ!

ಧಿಡೀರನೆ ಬೇಸಿಗೆಯ ನಟ್ಟ ನಡುವೆ
ಇಂತಾದ್ದೊಂದು ಮಳೆ ಸುರಿದು
ಊರು ಕೇರಿ ಕೊಚ್ಚೆ ಕೊಳೆ-
ಯೆಲ್ಲ ಕೊಚ್ಚಿ ಹೋಗಿ
ಇಮಾರತುಗಳು ಅಮಾನತಾದಾಗ
ನಾನು ನೀನು ಕದ್ದು ಕೊಬ್ಬರಿ ಬೆಲ್ಲ
ಉಪ್ಪು ಹುಣಸೆಹಣ್ಣು ಅಮಟೆಕಾಯಿ ಉಪ್ಪಿನಕಾಯಿ
ಅಂತೆಲ್ಲ ತರಾವರಿ ತಿಂದು ತೇಗಿದ್ದನ್ನ
ದೇವತೆಗಳು ಚಳಿಯಲ್ಲಿ ನಡುಗುತ್ತಲೇ ನೋಡಿದ್ದುಂಟು

ಆಮೇಲೆ ಕರೆಂಟಿಲ್ಲದ ಮಳೆಗಾಲದ
ಸಂಜೆಗಳಲ್ಲಿ ರವ್ವೆಂದು ರಾಚುವ
ಇರುಸಲಿನ ನಡುವೆಯೂ
ಕಿಟಕಿ ಬಳಿ ಹದವಾಗಿ ಸುಟ್ಟ
ಹಲಸಿನ ಹಪ್ಪಳ ಅಮ್ಮ ಕೊಟ್ಟ ಬಿಸ್ಸೀ
ಕಾಫೀ ಮತ್ತೊಂದಿಷ್ಟು ನಿನ್ನಿಂದ ಕದ್ದ
ಬೆಚ್ಹ ಬೆಚ್ಚನೆ ಕನಸುಗಳ ತಬ್ಬುತ್ತ
ನಕ್ಕಿದ್ದುಂಟು; ಹನಿಗಳು
ಇನ್ನೆಲ್ಲೋ ನಿನ್ನ ತಟ್ಟಿಯೇ ಬಂದಿವೆ
ಅಂತ ನಂಬಿದ್ದುಂಟು

ಮತ್ತೆ ತುಸು ತಡವಾಗಿ ಬಂದ
ಅಂತ ಚಳಿಗಾಲದ ಜೊತೆ ನೀ
ಮುನಿಸಿಕೊಂಡಿದ್ದ ನೋಡಿದ್ದುಂಟು
ಚಳಿಗಾಲದಲ್ಲಿ ಮಳೆಯಾಗುವುದಿಲ್ಲವಂತೆ
ಹಾಗಂತ ದೇವತೆಗಳು ಮೊನ್ನೆ ತಾನೇ ಹೇಳಿ ಹೋಗಿದ್ದಾರೆ
ಅಂತ ನೀ ಹೇಳಿದ ಸುಳ್ಳುಗಳ ನಂಬಿದ್ದುಂಟು; ನಂಬಿದಂತೆ ನಟಿಸಿದ್ದುಂಟು
ಆದೀತು ಬಿಡು ಒಂದು ಮಳೆ ಅಂತೆಲ್ಲ
ಸುಳ್ಳೇ ನಂಬಿಕೆಗಳ ಕೊಟ್ಟದ್ದುಂಟು

ಇಂದು ಹೀಗಾಯ್ತು.
ನಮ್ಮ ಹಿತ್ತಲಲ್ಲೂ ಎರಡು ಮಲ್ಲಿಗೆಗಳು ಅರಳಿ ನಿಂತವು.
ನಿಂತಿದ್ದ ಸೂರ್ಯ, ಮರೆತಿದ್ದ ಕಾಲಗಳ
ಮಿಕಿ ಮಿಕಿ ನೋಡುತ್ತಾ ನಾನೂ ನಿಂತೆ.

ನೆಟ್ಟವ ನಾನಲ್ಲ; ಎಂದೂ ನೀರುಣಿಸಲಿಲ್ಲ.
ತಮ್ಮದೇ ಹಿತ್ತಲೆಂಬಂತೆ ಅರಳಿಯೇ ಬಿಟ್ಟವಲ್ಲ!
ಇರುವುದು ನಾಲ್ಕೇ ದಳ; ಗತ್ತಿಗೇನು ಕಮ್ಮಿಯಿಲ್ಲ.
ತೂರಿ ಬರುವ ನರುಗಂಧಕ್ಕೆ ಸ್ವರಗಳೂ ನಾಚಿಬಿಟ್ಟವಲ್ಲ!
ರಾಗಗಳೂ ತೂಗಿಬಿಟ್ಟವಲ್ಲ!

ಹಿಂದೊಮ್ಮೆ…
ಚಂದ್ರನ ಕಾಂತಿ, ಮಲ್ಲಿಗೆಯ ಘಮ
ಸಂಪಿಗೆಯ ನಗು ಕದ್ದು ನೀ
ಓಡಿ ಬಂದಾಗಲೂ ನಿಂತು ಬಿಟ್ಟಿದ್ದೆ ಹೀಗೆಯೇ.
ಕೆನ್ನೆಗೊಂದು ದೃಷ್ಟಿ ಬೊಟ್ಟಿನಂತ ಮುತ್ತಿಡಬೇಕೆಂಬುದ ಸಹ ಮರೆತು.
ಆ ಕ್ಷಣ ರೂಪಕಗಳು ಮರೆತೇ ಹೋಗಿ
ಮತ್ತದೇ ಚಂದ್ರ ಮಲ್ಲಿಗೆ ಸಂಪಿಗೆಗಳ
ಕಡ ತಂದು ಬರೆದು ಬಿಟ್ಟಿದ್ದೆ.

ಇಂದು ನೆನೆದರೆ ನಿನ್ನ, ನೀನಿಲ್ಲ.
ಇದ್ದರೆ ನಿಲಿಸುತಿದ್ದೆ ನಿನ್ನ ಮಲ್ಲಿಗೆಯ ಬಳಿ
ಅನಂತ ಶಾಂತಿಯಂತ ನಿನ್ನ ಕಣ್ಣುಗಳ ಮುಚ್ಚಿ.
ಕಣ್ಣಲ್ಲಿ ಕಣ್ಣಿಟ್ಟು ನೀವು ಮಾತನಾಡುವಾಗ
ಕಣ್ಮುಚ್ಚಿ ತೇಲಿ ಹೋಗುತ್ತಿದ್ದೆ ನಶೆಯಲ್ಲಿ.
ಕಣ್ಮುಚ್ಚಿ ನಡೆದು ಬಿಡುತ್ತಿದ್ದೆ ಮಂಜು ಕವಿದ ಹಾದಿಗಳಲ್ಲಿ.

ಮಳೆ

Posted: ಏಪ್ರಿಲ್ 20, 2011 by sukhesh in ನನ್ನ ಕವಿತೆ
ಟ್ಯಾಗ್ ಗಳು:, , ,

ಸಮಾನಾರ್ಥಕಗಳ ಬರೆಯಿರಿ ಎಂದರು
ನನ್ನ ಹೆಸರಿಗೆ ನಿನ್ನ ಹೆಸರು
ಚೊಕ್ಕವಾಗಿ ಕೊರೆದು ಕುಳಿತೆ

ನವ್ಯ ಕಾವ್ಯದಂತ ಆಕಾಶ
ಇಣುಕುತ್ತಿತ್ತು ಕಿಟಕಿಯಿಂದ
ಈ ಬಾರಿ ಮುಂಗಾರು ಪ್ರಬಲ
ಸಾಧಾರಣದಿಂದ ಭಾರೀ ಮಳೆ
ಆಕಾಶವೇ ನಿನಗಾವುದು ಸಮಾನಾರ್ಥಕ?

ಇನ್ನೇನು ಮುಗಿದೇ ಬಿಡುತ್ತೆ ಕೊನೇ ಪಿರಿಯಡ್ಡು
ಗೊತ್ತೇ ಆಗಲಿಲ್ಲ ನೀ ಸರಿದು ಹೋದದ್ದು
ಜಿಯಾಗ್ರಫಿ ಕ್ಲಾಸಿನಲ್ಲಿ ಭೂ ಫಲಕಗಳು ಸರಿದು
ಹಿಸ್ಟರಿಯಲ್ಲಿ ತಲೆಗಳು ಉರುಳಿಬಿಟ್ಟವು
ಈಗ ನೆನೆಯುತ್ತ ಹೊರಟಿದ್ದೇನೆ; ಮಳೆ ಜೋರು