ಮಳೆಯಾಗಲೇಬೇಕಂತಿಲ್ಲ
ಪುಟ್ಟ ಅಡ್ಡ ಉದ್ದ ಗೆರೆ ಕೊರೆದಂತಿರೋ
ಗೋಡೆಯ ಮೇಲೆ
ಬೆಳೆದೇ ಬೆಳೆಯುತ್ತೆ ಹಸಿರು ಪಾಚಿ
ದಾಟುವುದು ಎಷ್ಟು ಕಷ್ಟ!
ಸಂಜೆ ಮುಗಿಯೋ ಹೊತ್ತಿಗೆ
ಸಣ್ಣ ಮಳೆ
ಬಯಾಲಜಿ ಬುಕ್ಕಿಂದ ನಿಧಾನ ಇಳಿವ
ಚಿಟ್ಟೆ; ಲೋಕವೆಲ್ಲ ಹಳದಿ ಹಳದಿ
ತಟವಟ ಸುರಿವ ಮುಗಿಲಿಗೆಲ್ಲಿಯ ವ್ಯವಧಾನ?
ನೆಂದ ಬೆಂಕಿಪೊಟ್ಟಣ
ಕೊರೆದರೂ ಹೊತ್ತದ ಬೆಂಕಿ
ಹಳೆಯ ಭಾವಚಿತ್ರ ಬತ್ತಿ
ಭಾವಗಳ ಹರಿಸಲಾರದೇನೋ…
ಕಂಗಳಲ್ಲಿ ಕನ್ನಡಿ ಬಿಂಬ
ಹೊಳೆವಾಗ
ಚಿಟ್ಟೆ ಯಾವುದೋ?
ಬಿಂಬ ಯಾವುದೋ?
ಬೆಳಕಿನ ವೇಗ ಯಾವುದೋ?
ಅಸಂಗತತೆಯ ಕೊನೆ ಯಾವುದೋ?