ಹೇಳಿ ಬಿಡುತ್ತೇನೆ ಕೇಳು ಗೆಳತಿ.
ತಲೆಗೆ ತಲೆ ಡಿಕ್ಕಿಯಾದದ್ದು
ಆಕಸ್ಮಿಕವೇ ಇರಬಹುದು
ತುಟಿಗೆ ತುಟಿ ತೆಕ್ಕೆಯಾದದ್ದು
ಖಂಡಿತಾ ಅಲ್ಲ!
ಧಿಡೀರನೆ ಬೇಸಿಗೆಯ ನಟ್ಟ ನಡುವೆ
ಇಂತಾದ್ದೊಂದು ಮಳೆ ಸುರಿದು
ಊರು ಕೇರಿ ಕೊಚ್ಚೆ ಕೊಳೆ-
ಯೆಲ್ಲ ಕೊಚ್ಚಿ ಹೋಗಿ
ಇಮಾರತುಗಳು ಅಮಾನತಾದಾಗ
ನಾನು ನೀನು ಕದ್ದು ಕೊಬ್ಬರಿ ಬೆಲ್ಲ
ಉಪ್ಪು ಹುಣಸೆಹಣ್ಣು ಅಮಟೆಕಾಯಿ ಉಪ್ಪಿನಕಾಯಿ
ಅಂತೆಲ್ಲ ತರಾವರಿ ತಿಂದು ತೇಗಿದ್ದನ್ನ
ದೇವತೆಗಳು ಚಳಿಯಲ್ಲಿ ನಡುಗುತ್ತಲೇ ನೋಡಿದ್ದುಂಟು
ಆಮೇಲೆ ಕರೆಂಟಿಲ್ಲದ ಮಳೆಗಾಲದ
ಸಂಜೆಗಳಲ್ಲಿ ರವ್ವೆಂದು ರಾಚುವ
ಇರುಸಲಿನ ನಡುವೆಯೂ
ಕಿಟಕಿ ಬಳಿ ಹದವಾಗಿ ಸುಟ್ಟ
ಹಲಸಿನ ಹಪ್ಪಳ ಅಮ್ಮ ಕೊಟ್ಟ ಬಿಸ್ಸೀ
ಕಾಫೀ ಮತ್ತೊಂದಿಷ್ಟು ನಿನ್ನಿಂದ ಕದ್ದ
ಬೆಚ್ಹ ಬೆಚ್ಚನೆ ಕನಸುಗಳ ತಬ್ಬುತ್ತ
ನಕ್ಕಿದ್ದುಂಟು; ಹನಿಗಳು
ಇನ್ನೆಲ್ಲೋ ನಿನ್ನ ತಟ್ಟಿಯೇ ಬಂದಿವೆ
ಅಂತ ನಂಬಿದ್ದುಂಟು
ಮತ್ತೆ ತುಸು ತಡವಾಗಿ ಬಂದ
ಅಂತ ಚಳಿಗಾಲದ ಜೊತೆ ನೀ
ಮುನಿಸಿಕೊಂಡಿದ್ದ ನೋಡಿದ್ದುಂಟು
ಚಳಿಗಾಲದಲ್ಲಿ ಮಳೆಯಾಗುವುದಿಲ್ಲವಂತೆ
ಹಾಗಂತ ದೇವತೆಗಳು ಮೊನ್ನೆ ತಾನೇ ಹೇಳಿ ಹೋಗಿದ್ದಾರೆ
ಅಂತ ನೀ ಹೇಳಿದ ಸುಳ್ಳುಗಳ ನಂಬಿದ್ದುಂಟು; ನಂಬಿದಂತೆ ನಟಿಸಿದ್ದುಂಟು
ಆದೀತು ಬಿಡು ಒಂದು ಮಳೆ ಅಂತೆಲ್ಲ
ಸುಳ್ಳೇ ನಂಬಿಕೆಗಳ ಕೊಟ್ಟದ್ದುಂಟು