ಎಲ್ಲೋ ಜೋರು ಮಳೆ ಸುರಿದಿರಬೇಕು. ಇಳೆ ಕರಗಿ ಸಾಗರದೆಡೆ ಹೊರಟ ಹಾಗೆ ಸೀತಾನದಿ ಕೆಂಪು ಕೆಂಪಾಗಿ ಸದ್ದು ಮಾಡುತ್ತಾ ಹರಿಯುತ್ತಿತ್ತು.

ಅವಳು ಎಲ್ಲೋ ನಮ್ಮ ಹಾಗೆ ಹಿಡಿದ ಕೊಡೆಗಳ ಮೇಲೆ ಬಿದ್ದ ಹನಿ ಇನ್ನೆಲ್ಲೆಲ್ಲೋ ಹರಿದು ಕೊನೆಗೆ ಮತ್ತೆ ಮೋಡ ಸೇರಿ ಹನಿಯಾಗುವ ಕೌತುಕದ ಬಗ್ಗೆ ನೀರು ನೋಡುತ್ತಾ ಕತೆ ಹೇಳುತ್ತಿದ್ದಳು. ಮಂಜಿನಂತೆ ಬೀಳುತ್ತಿದ್ದ ಮಳೆಗೆ ಅವಳ ಕೇಶರಾಶಿಯಿಂದ ಹೊರಡುತ್ತಿದ್ದ ಅವಳದೇ ಘಮದ ಸದ್ದಿನ ಮಾಧುರ್ಯ ಸವಿಯುತ್ತಾ ನಿಂತಿದ್ದೆ.

ಜೋರಿರಲಿಲ್ಲ; ಜುಮುರು ಮಳೆಯಷ್ಟೇ. ಗಾಳಿಯ ಸೆಳೆತ, ಕುಳಿರು ಹೆಚ್ಚಿತ್ತು. ನನ್ನ ಚಳಿ ಕಮ್ಮಿಯಾಗಲೊ ಏನೋ ನದಿಯಿಂದ ಬೀಸಿ ಬರುವ ಗಾಳಿಗೆ ಅಡ್ಡ ನಿಂತಿದ್ದಳು. ಆದರೂ ಮುಖಕ್ಕೆ ಗಾಳಿ ಬೀಸಿ ಬೀಸಿ ಹೊಡೆಯುತ್ತಿತ್ತು. ಐದಡಿ ಏಳು ಮಲ್ಲಿಗೆ ತೂಕದ ರಾಜಕುಮಾರಿ ಅಂತ ನಗಿಸುತ್ತಿದ್ದದ್ದು ನೆನಪಾಯಿತು.

“ಚಳಿ ಕಣೆ” ಅಂತ ಬಳಸಿ ಹಿಡಿದೆ. ಹತ್ತಿರದಲ್ಲೇ ಮನೆಗಳ ಬೆಳಕು ಹನಿಗಳ ವಕ್ರೀಭವನದ ನಡುವೆ ಆಡುತ್ತಿತ್ತು. ಮೆಲ್ಲಗೆ ಎದೆಗೊರಗಿದಳು.

ಹತ್ತು ವರ್ಷಗಳೇ ಕಳೆದು ಹೋಗಿವೆ. ಅಂದು ಬಿಟ್ಟು ಬಂದ ಗುಲ್ ಮೊಹರುಗಳಲ್ಲಿ ಈಗಲೂ ಹೂವಿರಬಹುದು. ಅದೇ ಮರಗಳ ಕೆಳಗೆ ಮತ್ತಾರೋ ಇಬ್ಬರು ಅದೇ ಅರ್ಥವಿಲ್ಲದ ಮಾತುಗಳಿಗೆ ನಗುತ್ತಾ ಇರಬಹುದು.

“ನಿಂಗೆ ಯಾವ ಜನ್ಮದಿಂದ ನಾನಿಷ್ಟ?”

ಗಾಳಿ ಒಮ್ಮೆ ಕಾಡ ನಡುವೆ ಹುಟ್ಟಿ ಮತ್ತೊಂದಿಷ್ಟು ಚಳಿಯನ್ನು ನೀರ ಮೇಲಿಂದ ಬೊಗಸೆ ಕೈಗಳಲ್ಲಿ ಎತ್ತಿಕೊಂಡು ಬಂದು ರಾಚಿತು. ಗಾಳಿಗೆ ಕುಣಿದ ತಲೆಗೂದಲನ್ನ ಮೆಲ್ಲ ಸರಿಸಿ ಕತ್ತಿಗೆ ಮುತ್ತಿಟ್ಟೆ.

ಕೈಗಳ ಬಿಗಿ ಸಡಿಲವಾಗದ ಹಾಗೆ ಮೆಲ್ಲ ನನ್ನೆಡೆಗೆ ತಿರುಗಿದಳು.

ಕವಿಗಳು ಬರೆವ ಹಾಗೆ ಅವಳ ಅಧರಗಳು ಮೆಲ್ಲ ನಡುಗುತ್ತಿದ್ದವೇ? ಕಣ್ಣುಗಳಲ್ಲಿ ಬೆದರಿದ ಜಿಂಕೆಮರಿಯೊಂದಿತ್ತೇ?

ಇಲ್ಲ.

ಚಳಿಗಾಲದ ಸಂಜೆಗಳಲ್ಲಿ ಸದ್ದಿರದೆ ಹರಿವ ನದಿ ಅವಳ ಕಣ್ಣಲ್ಲಿತ್ತೇ? ಬಹುಷಃ ಅದೇ ಸರಿಯೇನೋ!

ಹಿಂದೊಮ್ಮೆ ಶಾಂತ ಸ್ವಭಾವದ ಇದೇ ನದಿಯ ಕಣಿವೆಗಳಲ್ಲಿ ಮುಳುಗಿ ಉಸಿರು ನಿಂತದ್ದು, ಯಾರೋ ಬಂದು ನೀರಿನಿಂದ ಮೇಲೆತ್ತಿ ಬದುಕಿಸಿದ್ದು ನೆನಪಾಯ್ತು.

ಎಷ್ಟು ನೆನಪುಗಳು! ನಮ್ಮ ಉಸಿರು ನಿಂತ ಮೇಲೆ ನಮ್ಮ ನೆನಪುಗಳು ಎಲ್ಲಿ ಹೋಗುತ್ತವೆ? ಕಾಲಗರ್ಭದಲ್ಲಿ ನಮ್ಮ ಅರ್ಥವೇನು?

ಕಪ್ಪುಗಟ್ಟಿದ ಮುಗಿಲು ಯಾರೋ ತಟ್ಟಿ ಎಬ್ಬಿಸಿದ ಹಾಗೆ ಸುರಿಯಲು ಪ್ರಾರಂಭಿಸಿತು. ತೆಕ್ಕೆ ಬಿಡದೆ ಹಾಗೇ ರಸ್ತೆಯ ಆ ಬದಿಗೆ ನಡೆದೆವು. ಕಪ್ಪು ಕಾರೊಂದು ಕತ್ತಲೆ ಸೀಳುತ್ತಾ ಘರ್ಜಿಸುತ್ತಾ ಬರುತ್ತಿದೆ. ಈ ಸರಿರಾತ್ರಿ ಈ ಮಲೆನಾಡಿನ ರಸ್ತೆ ಮಧ್ಯೆ ನರಮನುಷ್ಯರು ತಬ್ಬಿಕೊಂಡು ನಡೆಯುತ್ತಿರುತ್ತಾರೆಂದು ಕನಸಲ್ಲೂ ಎಣಿಸಿರದ ಚಾಲಕ ಒಂದಷ್ಟು ಗೊಂದಲ ಒಂದಷ್ಟು ಭಯದ ನಡುವೆ ಕಾರನ್ನ ಸರ್ರೆಂದು ಬಲಕ್ಕೆಳೆದು ಬಯ್ಯುತ್ತಾ ಮುಂದೆ ಹೋದ.

“ಯಾಕೆ ಅಲ್ಲಿಂದ ಎಳ್ಕೊಂಡು ಬಂದೆ? ಎಷ್ಟು ಚಂದ ಇತ್ತು.”

“ಮಳೆ ಯಾವಾಗ್ಲೂ ಚಂದಾನೇ. ಹಾಗಂತ ಈ ಮಳೇಲಿ ನೆಂದ್ರೆ ನಾಳೆ ಹುಷಾರಿಲ್ಲ ಅಂತಾದ್ರೆ ನಿಮ್ಮಪ್ಪ ಕೇಳೋದು ನನ್ನೇ. ನನ್ ಜೊತೆ ಈ ರಾತ್ರೀಲಿ ಸುತ್ತೋಕೆ ಬಿಟ್ಟಿದ್ದೇ ದೊಡ್ಡದು ಗೊತ್ತಲ್ವಾ?”

“ಚಂದ ಇದೆ ಅಂದಿದ್ದು ಮಳೆಗಲ್ಲ”

ತೆಕ್ಕೆ ಯಾಕೋ ಬಿಗಿಯಾಯ್ತು. ಮೆಲ್ಲ ಮುಖವೆತ್ತಿ ಕಣ್ಣಲ್ಲಿ ಕಣ್ಣಿಟ್ಟವಳು ಏನು ಹೇಳಹೊರಟಿದ್ದಾಳೆ ಅಂತ ಗೊತ್ತಾಗಲಿಲ್ಲ.

“ದಡ್ಡ ಕಣೋ ನೀನು” ಅಂದವಳು ಕುತ್ತಿಗೆ ಬಳಸಿ ತುದಿಗಾಲ ಮೇಲೆ ನಿಂತು ಕಣ್ಣಿಗೆ ಕಣ್ಣಿಟ್ಟಳು.

ಅವಳ ತುಟಿಗಳಲ್ಲಿ ತಾಜಾ ಮಳೆಹನಿಯ ಘಮವಿತ್ತು. ಮೆಲ್ಲಗೆ ಕೆಳದುಟಿಯನ್ನು ಆವರಿಸುವಾಗ ಅವಳ ಮೂಗುಬೊಟ್ಟು ಕೆಂಪಾದಂತನ್ನಿಸಿತು. ಮಳೆಗೆ ತುಸು ನೆಂದಿದ್ದ ಕಿವಿಯನ್ನು ಅಂಗೈ ತಲುಪಿದಾಗ ಇಷ್ಟೇ ಇಷ್ಟು ಬಲಕ್ಕೆ ಕತ್ತು ಜರುಗಿಸಿ ಬಾಹುಬಂಧನ ಬಿಗಿಗೊಳಿಸಿದಳು.

ಎಷ್ಟು ಹೊತ್ತಿದ್ದೆವು ಆ ಕ್ಷಣಗಳಲ್ಲಿ? ಅಷ್ಟಕ್ಕೂ ಕಾಲಪ್ರವಾಹವನ್ನು ಇಷ್ಟಿಷ್ಟು ಅಂತ ಲೀಟರುಗಳಲ್ಲೂ ನಿಮಿಷಗಳಲ್ಲೂ ಅಳೆಯುವುದು ಮೂರ್ಖತನ ತಾನೇ? ಎಂದೂ ಸಾಲದಷ್ಟು ಅಂತಂದರೆ ಸಾಲದೆ?

ಇನ್ನೇನು ಹೊರಡಬೇಕು. ನಮ್ ನಮ್ಮ ಪ್ರಪಂಚಗಳ ಮೂಲೆಯಲ್ಲೆಲ್ಲಾದರೂ ಕದ್ದೊಯ್ದ ಕ್ಷಣಗಳನ್ನು ಬಚ್ಚಿಡಬೇಕು.

ಹೊರಗೆ ಮಿಂಚು ಗುಡುಗುಗಳ ಜುಗಲ್ಬಂಧಿ. ಮಳೆ ನಿಂತಿತ್ತು.

ಸೀತಾನದಿಯಲ್ಲಿ ಅದೇ ಪ್ರಶಾಂತಿಯಿತ್ತು.

ರಂಗಗೀತೆ

Posted: ಮಾರ್ಚ್ 5, 2017 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ರಂಗದಿಂದೊಷ್ಟು ದೂರ
ಸರಿದರೆ
ನಟ ಪ್ರೇಕ್ಷಕ ಮಾಸ್ತರೆಲ್ಲ
ಮೆಲ್ಲ ಮರೆಯಾಗಿ
ನನ್ನೊಳಗಿನ ನಾನು
ಮೈ ಮುರಿದು ಆಕಳಿಸಿ
ಏಳುತ್ತೇನೆ

ಆದರೂ…
ಕ್ಷೀಣ ದನಿಯ ಹಾರ್ಮೊನಿಯಮ್ಮು
ಕೇಳು ಕೇಳೆನುವ ಆತ್ಮಗೀತೆ

ಬರೆಯದ ರಂಗೋಲಿ
ಒಣ ಹವೆ ಧೂಳು
ಬಿಡುಗಡೆಯಿರದ ಪಾತ್ರ
ಗಳ ಇಲ್ಲೆ ಕಟ್ಟಿಟ್ಟು
ದಾಟಿ
ಹೊರಡಬೇಕಿದೆ

ಕಣಿವೆ ದಾಟದಿದ್ದೀತೆ ರಂಗಗೀತೆ?

ಎದೆ ಮೇಲೆ
ಕನಸಿಂದ ಹನಿದ
ಒದ್ದೆ ನೋವು
ಬೆಂಬಿಡದ ನೆರಳು.
ನಮ್ಮಾತ್ಮವನೆ ಮೀರುವುದುಂಟೆ ನಾವು?


ಬರೆದಿಟ್ಟ ಕವಿತೆ ಹಠಾತ್
ಮಾಯವಾದರೆ ಕಟ್ಟಿಟ್ಟ ಮೋಢ
ಮಳೆ ಸುರಿಸಿದಂತೆ
ರಸ್ತೆಗಳಲ್ಲಿ ಕೆನ್ನೆ ಗುಳಿಯ
ಹಾಗೆ ಗುಂಡಿಗಳು
ಬಿಡುಗಡೆಯ ಬೇಡಿ

ಇಂತಹ ಸಂಜೆಗಳಲ್ಲಿ
ಸಂದಿಗ್ಧ ಮುಗಿಲು
ಪಾಪಿ ಲೋಕದ ಕಪ್ಪು
ರಸ್ತೆಗಳ ಮೇಲೆ ಸುರಿವುದೇನನ್ನು
ಯಾಕಾಗಿ?

ಅಶಾಂತ ಟ್ರಾಫಿಕ್ಕಿನಡಿ ಸಿಲುಕಿದ
ಬಿಳಿ ಕಾರುಗಳೆಡೆ ತಪ್ತ
ಆತ್ಮಗಳು ಕಡಿಮೆ ದರದ ತರಕಾರಿಗಳ
ಹುಡುಕುವಾಗ
ಗಾಜಿನ ಪರದೆಯ ಹಿಂದೊಂದು
ಸಿಗರೇಟಿನಾತ್ಮವ ಸುಡುತ್ತೇನೆ
ಸುಳ್ಳು ತತ್ವಗಳು ಹುಟ್ಟಿ
ಮಾತನಾಡುತ್ತವೆ ಸುಳ್ಳು ಸಮಾಧಾನಗಳ

ಎಲ್ಲಿ ಹೋದೆ ಬೆಕ್ಕೆ?
ಒಣ ಹವೆ ಧೂಳು ಹೊಗೆಗಳ
ನಡುವೆ ಹಿಡಿ ಪ್ರೀತಿಯ ಲೆಕ್ಕ ಹಿಡಿವಾಗ
ಕಣ್ಣು ಕಟ್ಟಿಟ್ಟು ಯಾಕೆ ಹೋದೆ ಬಿಟ್ಟು?

“ಕಿರಗೂರಿನ ಗಯ್ಯಾಳಿಗಳು ಕತೇನ ಪಿಚ್ಚರ್ ಮಾಡ್ತವ್ರಂತೆ” ಅಂತ ತಿಂಗಳ ಹಿಂದೆ ಯಾರೋ ಹೇಳಿದಾಗ ಹುಬ್ಬೇರಿಸಿದ್ದೆ. ಅಷ್ಟರ ಮಟ್ಟಿಗೆ ಹುಚ್ಚು ಧೈರ್ಯ ಯಾರಿಗಪ್ಪಾ ಬಂತು ಅಂತ ತಲೆ ಕೆರೆದುಕೊಂಡಿದ್ದೆ ಹಾಗು ನಿರಾಯಾಸವಾಗಿ ಒಂದೊಳ್ಳೆ ಕತೆಯನ್ನ ಯಾರೋ ಹಾಳು ಮಾಡುವ ‘ಮಿಸ್ಟಿಕ್ಕಿಗೆ’ ಕೈ ಹಾಕಿದ್ದಾರೆ ಅಂತ ನನಗೆ ನಾನೇ ತೀರ್ಪು ಸಹಾ ಕೊಟ್ಟು ನಿಟ್ಟುಸಿರುಬಿಟ್ಟಿದ್ದೆ.

ನಿಟ್ಟುಸಿರಿಗೆ ಕಾರಣಗಳಿಲ್ಲದಿರಲಿಲ್ಲ. ಮೊದಲನೆಯದಾಗಿ ತೇಜಸ್ವಿಯ ಹೆಚ್ಚಿನ ಕತೆಗಳು, ಬರಹಗಳು ಸಿನಿ ಮಾಧ್ಯಮಕ್ಕೆ ಧಕ್ಕಲಾರದಂತವು ಅನ್ನುವುದು ನನ್ನ ನಂಬಿಕೆ. ಅವರ ಬರಹಗಳ ಹರಿವು ಅಗಾಧ. ಸಣ್ಣ ಕತೆಗಳೂ ಸಹಾ ಅವರ ಕ್ಯಾಮೆರಾದಲ್ಲಿ ಬಂಧಿಯಾಗುವ ಚಿಕ್ಕ ಹಕ್ಕಿಗಳ ಹಾಗೆ ರೆಕ್ಕೆ ಬಿಚ್ಚಿ ಹಾರಿ ಹಾರಿ ಮೂರು ಊರುಗಳನ್ನು ಆರು ಕೇರಿಗಳನ್ನು ದಾಟಿ ಬಂದಿರುತ್ತವೆ. ರೆಕ್ಕೆಯ ತುದಿಗಳನ್ನು ಪಶ್ಚಿಮ ಘಟ್ಟಗಳ ಸೌಂದರ್ಯಕ್ಕೂ, ಮೂಡಿಗೆರೆ ಸಂತೆಯ ಗದ್ಧಲಕ್ಕೂ, ಅಗಾಧ ಕುತೂಹಲಕ್ಕೂ ಮತ್ತು ಮಾನವ ಸಹಜ ಅನುಕಂಪಕ್ಕೂ ತಗುಲಿಸಿ ನೂರು ಬಣ್ಣಗಳನ್ನು ಅಂಟಿಸಿಕೊಂಡು ಹಾರುವ ಈ ಹಕ್ಕಿಗಳನ್ನು ಕೇವಲ ನರಮನ್ಸರಾದ ನಾವ್ಗಳು ಹೇಳುವುದು ಸಾಧ್ಯವೇ? ಕತೆಗಳಲ್ಲಿ ನಾನು ಸಂದೇಶಗಳನ್ನ ಕೊಡುವುದಿಲ್ಲ ಅಂತ ತೇಜಸ್ವಿ ಹೇಳಿದರೂ ಅವರ ಕತೆಗಳಲ್ಲಿ ಅಂತರ್ಗತವಾಗಿರುವ ನೂರೆಂಟು ಥೀಮುಗಳನ್ನು ಗ್ರಹಿಸುವ ಮತ್ತು ಇನ್ನೊಬ್ಬರಿಗೆ ಧಾಟಿಸುವ ತಾಕತ್ತು ಯಾರಿಗಿದೆ? ಕತೆಗಳಿಗೂ ಮೀರಿ ಬೆಳೆದು ನಿಜಜೀವನಕ್ಕೆ ನಡೆದು ಬಂದು ಬಿಡುವ ಪಾತ್ರಗಳನ್ನು ತೆರೆಯ ಮೇಲೆ ನರಮನ್ಸರಾದ ನಟರು ನಟಿಸಿ ತೋರಿಸುವುದಾದರೂ ಹೇಗೆ? ಪಾತ್ರ ಆಡುವ ಮಾತು ಎರಡಿದ್ದರೆ ಆಡದ ಮಾತುಗಳು ನೂರಿವೆ ಅಂತನ್ನಿಸುವ ಅಪ್ಪಟ ಮಣ್ಣಿನ ಮಕ್ಕಳ ತರಹದ ನಟರು ಸಿಕ್ಕಿಯಾರೆ?

ಕತೆ ಓದುವಾಗ ಸಿಕ್ಕುವ ಸಂತೋಷವನ್ನು ಗಾಂಧಿನಗರದ ನಿರ್ಧೇಶಕ ಮಹಾಶಯರು ಉಳಿಸಿಯಾರೇ?

ಸ್ವಲ್ಪ ಸಮಾಧಾನ ಸಿಕ್ಕಿದ್ದು ಕತೆ ಹೇಳುವ ಜವಾಬ್ಧಾರಿ ಹೊತ್ತಿರುವುದು ಸುಮನ್ ಮೇಡಂ ಅಂತ ಗೊತ್ತಾದ ಮೇಲೆ.

ಆದರೆ ಪೂರ್ತಿ ಸಮಾಧಾನ ಸಿಕ್ಕುವ ನಂಬಿಕೆ ಇರಲೇ ಇಲ್ಲ.

ನಿನ್ನೆ ಮಾಮೂಲಿನ ಹಾಗೆ ಸಿಧ್ಲಿಂಗೇಷ್ವರ ಟಾಕೀಸು ಹಾಗು ಮಾಮೂಲಿನ ಹಾಗೆ ರಾತ್ರಿ ಒಂಬತ್ತರ ಷೋ. ಮಾಮೂಲಿನ ಹಾಗೆ ಐದು ನಿಮಿಷ ಲೇಟು.

ಪಿಚ್ಚರು ಶುರುವಾಗುತ್ತಲೇ ತೆರೆಯ ಮೇಲೆ ಪಾತ್ರಗಳ ಸಾಲು. ಅದೇ ದಾನಮ್ಮ, ಅದೇ ಕಾಳೇಗೌಡ, ಅದೇ ಶಂಕ್ರಪ್ಪ ಮತ್ತು ಅದೇ ಧೈತ್ಯ ಮರ. ಕತೆಯಲ್ಲಿ ಹಾಸುಹೊಕ್ಕಾಗಿರುವ ಅದೇ ಹಾಸ್ಯಪ್ರಜ್ಞೆ. ಹಳ್ಳಿಗರ ಮುಗ್ಧತೆ, ಹಳ್ಳಿಯ unadultrated ಸೌಂದರ್ಯ, ಪರಂಪರಾಗತವಾಗಿ ಬಂದ ನಂಬುಗೆಗಳು, ಸಂಭಂಧಗಳು, ಸೇಂದಿ ಅಂಗಡಿಯಲ್ಲಿನ ಕ್ಷಣಗಳು, ಜಗಳವಾಡುತ್ತಲೇ ಒಬ್ಬರಿಗೊಬ್ಬರು ಮಿಡಿಯುವ ಹೃದಯಗಳು. ಕತೆ ಹೇಳುವಲ್ಲಿ ಎಷ್ಟು ಬೇಕೋ ಅಷ್ಟು ಧೈರ್ಯ ಮತ್ತು ಅಷ್ಟೇ ಸಂಯಮ ಎರಡನ್ನೂ ಸುಮನಾ ಮೇಡಂ ತೋರಿದ್ದಾರೆ. ಹಾಗಾಗಿ ಕತೆ ಎಲ್ಲೂ ನಿಲ್ಲದೆ, ತುಂಬಾ ಕಡಿಮೆ ಜಾಗಗಳಲ್ಲಿ ಬೋರು ಹೊಡೆಸಿ ಮತ್ತು ಹೆಚ್ಚಿನ ಫ್ರೇಮುಗಳಲ್ಲಿ ನಗಿಸಿ ನೋಡುಗರನ್ನು ಒಳಗೊಳ್ಳುತ್ತಾ ಸಾಗುತ್ತದೆ. ಸಾಧು ಮಹಾರಾಜ್ ಸಂಗೀತ ಕತೆಗೆ ಹಿತವಾಗುವಷ್ಟು ಹಿನ್ನೆಲೆಯನ್ನು ಒದಗಿಸುತ್ತದೆ.

ದಾನಮ್ಮ ಪಾತ್ರಧಾರಿ ಶ್ವೇತಾ ಶ್ರೀವಾತ್ಸವ್ ಬುಕ್ಕಿನ ಕೊನೆ ಪೇಜಿನಿಂದ ದಾನಮ್ಮ ನೆಗೆದು ಬಂದಳೇನೋ ಅನ್ನಿಸುವ ಹಾಗೆ ನಟಿಸಿದ್ದಾರೆ. ಸುಕ್ರುತಾ ವಾಘ್ಲೆ ಇದು ಅತಿಯಾಯ್ತು ಅನ್ನಿಸುವಷ್ಟು ಅತ್ಯಾಭಿನಯ ಕೊಟ್ಟಿದ್ದಾರೆ. ಕಿಶೋರ್ ಮತ್ತು ಅಚ್ಚ್ಯುತ್ ಎಂದಿನ ಹಾಗೆ ತಮ್ಮ ಪಾತ್ರಗಳಿಗೆ ಹೊಂದಿಕೊಂಡಿದ್ದಾರಾದರೂ ಇಬ್ಬರಿಂದಲೂ ಇನ್ನೂ ಹೆಚ್ಚಿನ ಅಭಿನಯ ಸಾಧ್ಯವಿತ್ತು. ಊರಳ್ಳಿ ಹೆಗ್ಡೆಯಾಗಿ ಶರತ್ ಲೋಹಿತಾಶ್ವ ಇಶ್ಟವಾಗಲಿಲ್ಲ.

ವೈಯಕ್ತಿಕವಾಗಿ ತುಂಬಾ ಸಿಟ್ಟು ಬಂದಿದ್ದು ಕಿರಗೂರನ್ನು ನನ್ನ ಮಲೆನಾಡಿನಿಂದ ಹೊರಗೆ ಸಾಗಿಸಿದ್ದಕ್ಕೆ. ಕತೆ ಓದಿಲ್ಲದವರಿಗೆ ಅದು ಹೆಚ್ಚಿನ ತೊಂದರೆ ಕೊಡದೇ ಹೋದರೂ ನನಗೆ ಇದು ಇರಬೇಕಾದ ಕಡೆ ಇಲ್ಲ ಅನ್ನುವುದು ಕೊರೆಯುತ್ತಲೇ ಇತ್ತು.

ಇನ್ನೂ ಹೆಚ್ಚಿನ ಸಿಟ್ಟು ಬಂದಿದ್ದು ಸೆನ್ಸಾರ್ ಬೋರ್ಡಿನ ಅವಿವೇಕಿಗಳ ಮೇಲೆ. ಸಮಾಜದಲ್ಲಿ ಇಲ್ಲದ್ದು ಚಿತ್ರಗಳಲ್ಲಿ ಬಂದು ನೋಡುಗರನ್ನು ಹಾಳು ಮಾಡಿಬಿಡುತ್ತದೆ ಅನ್ನುವ ಮೂಢನಂಬಿಕೆ ಚಿತ್ರದ ದೇಸೀ ಸೊಗಡನ್ನು ಸಾಕಷ್ಟು ಮಟ್ಟಿಗೆ ಹಾಳುಗೆಡವಿದೆ.

ಒಂದೊಳ್ಳೆಯ ಕತೆಯನ್ನ ಅಷ್ಟೇ ಚೆನ್ನಾಗಿ ಹೇಳಿದ್ದಕ್ಕೆ ನಿರ್ಧೇಶಕರಿಗೂ ಮತ್ತು ಇಂತಹ ಒಂದು ಪ್ರಯತ್ನಕ್ಕೆ ದುಡ್ಡು ಕೊಡುವ ಗುಂಡಿಗೆ ತೋರಿದ್ದಕ್ಕೆ ನಿರ್ಮಾಪಕರಿಗೂ ಹಾಗು ಕತೆಯ ಹಕ್ಕನ್ನು ಸರಿಯಾದ ಕೈಗಳಿಗೆ ಕೊಟ್ಟ ರಾಜೇಶ್ವರಿ ಮೇಡಂಗೂ ನನ್ನದೊಂದು ನಮಸ್ಕಾರ.

ಕನ್ನಡ ಚಿತ್ರ ರಂಗಕ್ಕೆ ರೋಲ್ ಮಾಡೆಲ್ ಆಗಬೇಕಿರುವುದು ‘ಕಿರಗೂರಿನ ಗಯ್ಯಾಳಿಗಳು’ ತರಹದ ಚಿತ್ರಗಳು. ಕತೆಯನ್ನು ಎಲ್ಲಿಂದ ಹೆಕ್ಕಬೇಕು, unfilmable ಅಂತ ಅನ್ನಿಸುವ ಕತೆಗಳನ್ನು ಹೇಗೆ ತೆರೆಗೆ ತರಬೇಕು ಇತ್ಯಾದಿ ಅಂಶಗಳನ್ನು ತೆಲುಗು ತಮಿಳು ಚಿತ್ರಗಳಿಂದ ಕದಿಯುವ ತೆವಲನ್ನು ಬದಿಗಿರಿಸಿ ಕಲಿತರೆ ಈ ಪ್ರಯತ್ನ ಸಾರ್ಥಕವಾದೀತು.

‘ರಿಕ್ಕಿ’ ನೋಡಿದೆ.

ಆಮೇಲೆ ಒಂದಷ್ಟು ಹೊತ್ತು ಕತೆಗಳ ಬಗ್ಗೆ, ಮನುಷ್ಯರ ಬಗ್ಗೆ, ಪಾತ್ರಗಳ ಬಗ್ಗೆ ಯೋಚನೆ ಮಾಡಿದೆ.

ಏಕೆ ಭರವಸೆ ಮೂಡಿಸುವ, ಆಶಯ ತುಂಬಿಸುವ trailer ಗಳು ಹಿರಿತೆರೆಯ ಮೇಲೆ ಬಂದಾಗ ತಲೆನೋವು ತರಿಸುತ್ತವೆ?

ಏಕೆ ಒಂದು ಗಂಭೀರವಾದ ಕತೆ ತೆರೆಯ ಮೇಲೆ ಪೇಲವವಾಗುತ್ತದೆ?

ಏಕೆ ಒಂದಷ್ಟು ಚಿತ್ರಗಳು, ಪಾತ್ರಗಳು ಮರೆತೆನಂದರೆ ಮರೆಯಲಿ ಹ್ಯಾಂಗ ಅಂತ ತಲೆಯೊಳಗೆ ಗೂಡು ಕಟ್ಟಿಕೊಳ್ಳುತ್ತವೆ?

ಬಿಡಿ ಬಿಡಿಯಾಗಿ ನೋಡಿದಾಗ ಅಧ್ಬುತ ಅನ್ನಿಸುವ ಕ್ಷಣಗಳು ಒಂದಿಡೀ ಚಿತ್ರವಾದಾಗ ಹೇಗೆ ಅರ್ಥ ಕಳೆದುಕೊಳ್ಳುತ್ತವೆ?

ಅಷ್ಟಕ್ಕೂ ಒಳ್ಳೆಯ ಕತೆಯ, ಒಳ್ಳೆಯ ಸಿನೆಮಾದ ಲಕ್ಷಣಗಳೇನು?

ಸಿನಿಮಾ ಭ್ರಮೆಗಳನ್ನ ಮಾರಬೇಕು ಅನ್ನುವುದು ಗಾಂಧಿನಗರದ (ಹಾಗು ಇತರ ಭಾಶೆಗಳ ಚಲನಚಿತ್ರಗಳ) ಬಲವಾದ ನಂಬುಗೆ ಅನ್ನಿಸುತ್ತೆ. ಹಾಗಾಗಿಯೇ ಇಲ್ಲಿ ನಾಯಕ ಅನಾಯಾಸವಾಗಿ ಹತ್ತು ಜನ ಖಳರನ್ನ ಗುದ್ದಿ ಪುಡಿ ಮಾಡುತ್ತಾನೆ. ದೇವರಿಗೂ ಒಂದು ಕೈ ಹೆಚ್ಚು ಅನ್ನುವಷ್ಟು ಒಳ್ಳೆಯವನಾಗಿರುತ್ತಾನೆ. ನಾಯಕಿ ತ್ರಿಪುರ ಸುಂದರಿಯಾಗಿಯೇ ಇರುತ್ತಾಳೆ ಮತ್ತು ನಾಯಕನಷ್ಟೇ ಒಳ್ಳೆಯವಳಾಗಿಯೂ ಇರುತ್ತಾಳೆ. ಖಳರು ಸಾಕ್ಷಾತ್ ರಾಕ್ಷಸರೇ ಆಗಿರುತ್ತಾರೆ. ಪೋಲೀಸರು ಒಮ್ಮೊಮ್ಮೆ ಒಳ್ಳೆಯವರೂ ಒಮ್ಮೊಮ್ಮೆ ಕೆಟ್ಟವರೂ ಮತ್ತು ಹೆಚ್ಚಾಗಿ ನಿಷ್ಪ್ರಯೋಜಕರೂ ಆಗಿರುತ್ತಾರೆ. ಇಲ್ಲಿ ಮ್ಯಾಜಿಕ್, ಸರ್ಕಸ್, ದೇಶ ವಿದೇಶದ ಬೆಟ್ಟ ಗುಡ್ಡಗಳು, ಕನ್ಯೆಯರು ಎಲ್ಲವೂ ಸಿಕ್ಕುತ್ತವೆ.

ಆದರೆ ಸಾಧಾರಣ ಮನುಷ್ಯರು ಮಾತ್ರ ಸಿಕ್ಕುವುದಿಲ್ಲ.

ಮನುಷ್ಯನ ಎಲ್ಲಾ ಕ್ರಿಯೆಗಳ ಹಿಂದೆ ಒಂದು ಪ್ರೇರಣೆ ಮತ್ತು ಒಂದು ಯೋಚನಾವಿಧಾನ ಇರುತ್ತವೆ ಅನ್ನುವುದು ನನ್ನ ನಂಬುಗೆ. ಸರಾಗವಾಗಿ ದಿನನಿತ್ಯದ ಕ್ರಿಯೆ ಪ್ರಕ್ರಿಯೆಗಳು ನಡೆದು ಹೋಗುವಾಗ ಕತೆಗಳು ಹುಟ್ಟುವುದಿಲ್ಲ. ಕುಲುಮೆ ಕುಟ್ಟುವವನು ಕುಲುಮೆ ಕುಟ್ಟಿ ಹಾರೆ ಗುದ್ದಲಿಗಳನ್ನ ಮಾಡುತ್ತಾ, ಕುಂಬಾರ ಮಡಿಕೆ ಕುಡಿಕೆ ಮಾಡುತ್ತಾ, ಉಳುವವನು ಉಳುತ್ತಾ, ಊರ ಗೌಡರು ಚೌಕಾಬಾರ ಆಡುತ್ತಾ, ಸೂರ್ಯ ಹುಟ್ಟಿ ಮರೆಯಾಗುತ್ತಾನೆ. ಇಲ್ಲಿ ಮುಳುಗುವ ಸೂರ್ಯನ ಅಂದ ಚಂದ ಹೊಗಳಿ ಕವಿತೆ ಬರೆಯಬಹುದಷ್ಟೆ.

ಪ್ರೇರಣೆ ಮತ್ತು ಯೋಚನೆಗಳ ನಡುವೆ ಘರ್ಷಣೆ ನಡೆದಾಗ ಕತೆಗಳು ಹುಟ್ಟುತ್ತವೆ. ಹೀಗೆ ಹುಟ್ಟುವ ಕತೆಗಳಷ್ಟೇ ಮನುಷ್ಯರನ್ನ ಅಳಿಸಿ, ನಗಿಸಿ, ಭಯ ಭೀತರನ್ನಾಗಿಸುತ್ತವೆ. ಇವೇ ಕೆಲವು ಕತೆಗಳು ನಮ್ಮ ನಂಬುಗೆಗಳ ಬುಡಕ್ಕೆ ಕೈ ಹಾಕಿ ನಮ್ಮನ್ನು ಧಿಗ್ಭ್ರಮೆಗೊಳಿಸುತ್ತವೆ.

ಇಂತಹಾ ಕತೆಗಳನ್ನ ಕಟ್ಟುವುದು ಸುಲಭದ ಕೆಲಸವಲ್ಲ. ಒಮ್ಮೆ ಓದುಗನಿಗೆ ಇದು ಅಸಹಜ ಅನ್ನಿಸಿದ ತಕ್ಷಣ ಕತೆಗಾರ ಸೋತುಬಿಡುತ್ತಾನೆ. ಅಲ್ಲಿಗೆ ಕತೆಯ ಕತೆ ಮುಗಿದುಬಿಡುತ್ತದೆ.

ಒಳ್ಳೆಯ ಕತೆಗಳು ಕಟ್ಟಿದ ಕತೆಗಳಾಗಿರುವುದಿಲ್ಲ; ಹುಟ್ಟಿದ ಕತೆಗಳಾಗಿರುತ್ತವೆ. ಬಹಳ ಲೇಖಕರು ಹೇಳುವ ಹಾಗೆ ಪಾತ್ರಗಳನ್ನ ಹುಟ್ಟಿಸುವುದಷ್ಟೇ ಕತೆಗಾರನ ಕೆಲಸ. ಒಮ್ಮೆ ಪಾತ್ರಕ್ಕೆ ಗುಣಾವಗುಣಗಳನ್ನ ಕೊಟ್ಟ ಮೇಲೆ ಪಾತ್ರ ಧಿಗಿಣ ಹಾಕಿ ಕುಣಿಯುತ್ತದೆ. ಪಾತ್ರದ ಕುಣಿತವನ್ನ ಸ್ವಚ್ಛ ಕಣ್ಣುಗಳಿಂದ ಬಣ್ಣಿಸುವುದಷ್ಟೇ ಕತೆಗಾರನ ಕೆಲಸ. ಪಾತ್ರದ ಜುಟ್ಟು ಹಿಡಿದು ಕತೆಗಾರ ಆಡಿಸ ಹೊರಟರೆ ಕತೆ ಹಾಳಾಗುತ್ತದೆ.

‘ರಿಕ್ಕಿ’ಯ ವಿಶಯವನ್ನೇ ಸ್ವಲ್ಪ ಯೋಚನೆ ಮಾಡಿದರೆ ಚಿತ್ರ ಕೆಟ್ಟು ಹೋಗಿರುವುದಕ್ಕೆ ಕಾರಣಗಳು ಅನಾಯಾಸವಾಗಿ ಸಿಗುತ್ತವೆ. ಮನೆ ಕಳೆದುಕೊಂಡು ನಕ್ಸಲ್ ಆಗಿ ರಾಧೆ ಬದಲಾಗುವುದು ಚಿತ್ರದ ಹಿನ್ನೆಲೆಯಲ್ಲಿ ಸಹಜ ಘಟನೆ. ಅದನ್ನು ಬಿಟ್ಟರೆ ಇಡೀ ಚಿತ್ರದಲ್ಲಿ ಹೆಚ್ಚಿನ ಪಾತ್ರಗಳಿಗೆ ಯಾವುದೇ ಆರೋಪಿತ ಗುಣಗಳಿಲ್ಲ. ಕಾಡಿನಿಂದ ರಾಧೆಯನ್ನ ಕರೆತರುವ ಹಠ ತೊಟ್ಟ ನಾಯಕನಿಗೆ ಆ ಹಠ ಎಷ್ಟು ಜನರ ಬಲಿ ಬೇಡುತ್ತಿದೆ ಎನ್ನುವ ಪ್ರಜ್ಞೆಯೂ ಇರುವುದಿಲ್ಲ. ಚೆ ಗುವಾರನ ಪುಸ್ತಕ ಹಿಡಿದು ಓಡಾಡುವ ‘ಮಾಸ್ಟರ್’ನ ಪಾತ್ರದ ಅಗಾಧ ಸಾಧ್ಯತೆಗಳನ್ನ ಕತೆ ಕಡೆಗಣ್ಣಿನಿಂದಲೂ ನೋಡುವುದಿಲ್ಲ. ನಾಯಕನ ಚಿಕ್ಕಪ್ಪನ ಪಾತ್ರ ಕತೆಯ ಎಡಬಿಡಂಗಿತನಕ್ಕೆ ಸಾಕ್ಷಿಯೇನೋ ಅನ್ನುವ ಹಾಗೆ ರಾಧೆಯನ್ನ ಕಾಪಾಡಲು ಆಗದ್ದಕ್ಕೆ ಅಳುತ್ತದೆ, ನಕ್ಸಲರಿಗೂ ಬೆಂಬಲಿಸಿ ಪೋಲೀಸರೊಡನೆಯೂ ಕೈ ಮಿಲಾಯಿಸುತ್ತದೆ. ಕೊನೆಗೆ ಇಡೀ ಚಿತ್ರದ moral center ಆದ ರಾಧೆ ಸಹಾ ತನ್ನ moral center ನಿಂದ ಹೊರಹೊರಟು ತೊಳಲುತ್ತಾಳೆ.

ಚಿತ್ರದಲ್ಲಿ ನಮ್ಮ ನಿಮ್ಮ ನಡುವಿನಿಂದ ಹೆಕ್ಕಿ ತೆಗೆದ ಪಾತ್ರಗಳಿವೆ. ನಮ್ಮ ನಡುವಿನದೇ ಆದ ನಕ್ಸಲ್ ಸಮಸ್ಯೆಯಿದೆ. ಒಂದೆರಡು stand out ಕ್ಷಣಗಳಿವೆ.  ರಕ್ಷಿತ್ ಶೆಟ್ಟಿಯನ್ನು ಬಿಟ್ಟರೆ ಉಳಿದವರು ಚೆನ್ನಾಗಿಯೇ ನಟಿಸಿದ್ದಾರೆ. ಆದರೆ ಸಹಜತೆ ಮತ್ತು ಎಲ್ಲವನ್ನೂ ಬಂಧಿಸುವ ಸೂತ್ರದ ಕೊರತೆ ಚಿತ್ರ ಸ್ಮರಣೀಯವಾಗಿಸುವುದನ್ನು ತಪ್ಪಿಸಿವೆ.

ಆಲೋಚನಾರಹಿತ capitalism ನ ಅನಾಹುತಗಳನ್ನ ಮತ್ತು ನಕ್ಸಲ್ ವಾದದ ಮಜಲುಗಳನ್ನ ಶೋಧಿಸುವ ಎಲ್ಲಾ ಸಾಧ್ಯತೆಗಳನ್ನು ನಿರ್ದೇಶಕರು ಕೈ ಚೆಲ್ಲಿದ್ದಾರೆ. ಅದೇ ಜಾಗವನ್ನು ಅನಾವಶ್ಯಕವಾಗಿ ಹಾಡುಗಳು ಮತ್ತು ಮೈ ಪರಚಿಕೊಳ್ಳುವಂತಹ ಹಾಸ್ಯ ತುಂಬಿಕೊಂಡಿವೆ.

ಒಂದು ವಿಭಿನ್ನವಾದ ಚಿತ್ರ ಮಾಡಲು ಹೊರಡುವ ಧೈರ್ಯ ತೋರಿಸಿದ್ದಕ್ಕೆಮೆಚ್ಚುಗೆ ತೋರಿಸಿದರೂ, ಈ ಎಲ್ಲಾ ನ್ಯೂನತೆಗಳನ್ನು ಮರೆಯಲು ಆಗುವುದಿಲ್ಲ.

ಎಲ್ಲವನ್ನೂ ಮೀರಿ ಸಿನೆಮಾ ಕಲೆಗಳ ಸಂಗಮ. ಅದು ಖಂಡಿತಾ ಸಮಯ ಬೇಡುತ್ತದೆ. ಅಸಾಧಾರಣ ಪ್ರತಿಭಾವಂತರಾದ ರಕ್ಷಿತ್ ಮತ್ತು ರಿಷಭ್ ಬಹುಷಃ ಮುಂದಿನ ದಿನಗಳಲ್ಲಿ commercial ಒತ್ತಡಗಳನ್ನ ಮೀರಿದರೆ ಒಳ್ಳೆಯ ಚಿತ್ರಗಳನ್ನು ಖಂಡಿತಾ ಕೊಡಬಹುದು.

ಮುಗಿಲು ಕೆಂಪಾಗಲು ಇನ್ನು ಸ್ವಲ್ಪೇ ಹೊತ್ತು. ನಿಶ್ಯಬ್ಧದ ರುಚಿ ಹಾಳಾಗಬಾರದು ಅಂತಲೋ ಏನೋ, ಸೇತುವೆಯ ಕೆಳಗೆ ತುಂಗೆ ಮೆಲ್ಲ ಸದ್ದಿರದೆ ಹರಿಯುತ್ತಿದ್ದಳು. ಕುಳಿತಿದ್ದ ಬಂಡೆ ಇನ್ನೂ ಮದ್ಯಾಹ್ನ ಸೂರ್ಯ ಕಳಿಸಿದ್ದ ಶಾಖವನ್ನ ಹಿಡಿದಿಟ್ಟಿದ್ದರಿಂದ ಅಪ್ಯಾಯಮಾನವಾದ ಬಿಸಿ ಇತ್ತು. ತಣ್ಣನೆ ನೀರಲ್ಲಿ ಕಾಲಿಳಿಬಿಟ್ಟು ಕುಳಿತು ನದಿಗುಂಟ ಬೆಳೆದ ಹಸಿರನ್ನೇ ನೋಡುತ್ತಿದ್ದೆ. ಸೇತುವೆಯ ಮೇಲೆ ಆಗಾಗ ವಾಹನಗಳು, ಅಬ್ಬೇಪಾರಿ ಜನರೂ ಹರಿದು ಹೋಗುತ್ತಿದ್ದರು. ಹೀಗೆ ಹರಿದು ಹೋದಾಗಲೆಲ್ಲ ಸೇತುವೆಯ ಕಮಾನಿನ ಮೇಲೆ ಸುಕಾ ಸುಮ್ಮನೆ ಕೂತು ಕಾಲಹರಣ ಮಾಡುತ್ತಿದ್ದ ಕಾಗೆಗಳು, ಪಾರಿವಾಳಗಳು ಹಾರಿ ಅನತಿ ದೂರದಲ್ಲಿ ಬೇಕಾಬಿಟ್ಟಿ ಬೆಳೆದು ನಿಂತಿದ್ದ ಹಸಿರು ಮರಗಳ ಮೇಲೆ ಬಾಡಿಗೆಗೆ ಮನೆ ಮಾಡುತ್ತಿದ್ದವು ಮತ್ತು ಮತ್ತೆರಡೇ ಚಣದಲ್ಲಿ ನೆಂಟರ ಮನೆಯಿಂದ ಮನೆಗೆ ಮರಳುವಂತೆ ಹಾರಿ ಸೇತುವೆಯ ಬಾಹುಗಳೊಳಗೆ ಸೇರಿಬಿಡುತ್ತಿದ್ದವು.

“ಎಷ್ಟು ಚಂದ ಇದೆ ಅಲ್ಲಾ ಈ ಜಾಗ! ಒಳ್ಳೇ ಕವಿತೆ ಇದ್ದ ಹಾಗಿದೆ”

ಪಕ್ಕದಲ್ಲಿ ಅವಳು ಕುಳಿತಿದ್ದಾಳೆ ಎಂದು ಅಚಾನಕ್ಕಾಗಿ ನೆನಪಾಯಿತು. ಇಷ್ಟು ಹೊತ್ತು ಏನೂ ಯೋಚನೆ ಮಾಡದೆ ಆರಾಮಾಗಿದ್ದೆ. ಈಗ ಸುಮ್ಮನೆ ಸಂಬಂಧವೇ ಇರದ ಮಾತು. ಮದುವೆ ಮುಗಿಸಿ ಒಬ್ಬನೇ ಬಂದಿದ್ದರೆ ಒಳ್ಳೆಯದಿತ್ತು.

“ಒಳ್ಳೇ ಕವಿತೆ ಅಂತ ಇರುತ್ತಾ? ಒಳ್ಳೇ ಕವಿತೆಗೂ ಕೆಟ್ಟ ಕವಿತೆಗೂ ಏನು ಡಿಫರೆನ್ಸು?”

“ಏನೋಪ್ಪಾ”

“ಈ ಡಿಫರೆನ್ಸೇ ಗೊತ್ತಿಲ್ಲ. ಮತ್ತೆ ಅದು ಹೆಂಗೆ ನನ್ನ ಬಗ್ಗೆ ಎಲ್ಲಾ ಗೊತ್ತು ಅಂತ ಹೇಳ್ತೀಯ?”

“ಏನು? ಏನು ಸಂಬಂಧ ಅದ್ಕೂ ಇದ್ಕೂ? ನೀನೇನು ಕವಿತೇನ? ಅದ್ರಲ್ಲೂ ಒಳ್ಳೇ ಕವಿತೇನ?”

ಹ್ಮ್. ಯಾಕೆ ಬೇಕಿತ್ತು ಈ ಕಾಡು ಹರಟೆ? ನದಿ ಅದರ ಪಾಡಿಗೆ ಹರೀತಿತ್ತು. ಸೂರ್ಯ ಇನ್ನೇನು ಮುಳುಗ್ತಾ ಇದ್ದ. ತೆಪ್ಪಗೆ ಇವಳನ್ನ ಛತ್ರಕ್ಕೆ ಬಿಸಾಕಿ ಲಾಡ್ಜು ಸೇರಬಹುದಿತ್ತು. ತುಂಗಾ ಕಾಲೇಜಿನಲ್ಲಿ ಸಾಹಿತ್ಯ ಓದಿದ ಮಾತ್ರಕ್ಕೆ ಅದನ್ನೆಲ್ಲಾ ನೆನಪಿಟ್ಟುಕೊಂಡು ಬೇಡದ ಹೊತ್ತಲ್ಲಿ ಬೇಡದ ಜನರ ಜೊತೆ ಹರಟುವುದು ಯಾಕಪ್ಪಾ.

“ನಾನು ಕೆಟ್ಟ ಗದ್ಯ. ನಡಿ ಈಗ. ನಿನ್ನ ಅಪ್ಪ ಇಷ್ಟು ಹೊತ್ತಿಗೆ ಪೋಲಿಸ್ ಕಂಪ್ಲೇಂಟ್ ಕೊಡದೆ ಇದ್ರೆ ನಿನ್ನ ಛತ್ರಕ್ಕೆ ಬಿಟ್ಟು ನಾನು ಬೆಂಗಳೂರಿಗೆ ಬಸ್ಸು ಹುಡುಕಬೇಕು”

ವಾಪಾಸು ಸೇತುವೆಯ ಮೇಲೆ ಬರುತ್ತಿದ್ದಂತೆ ಕಮಾನಿನ ಹಕ್ಕಿಗಳೆಲ್ಲಾ ಕರ್ಕಶ ದನಿಯಲ್ಲಿ ಕೂಗುತ್ತಾ ದೂರ ತೀರಕ್ಕೆ ಹಾರಿದವು. ಮತ್ತೆ ಮರಳುತ್ತವೋ ಇಲ್ಲವೋ!!

ಕಡಲು

Posted: ಏಪ್ರಿಲ್ 1, 2015 by sukhesh in ನನ್ನ ಕವಿತೆ
ಟ್ಯಾಗ್ ಗಳು:,

ನನ್ನ ಮೇಜಿನ ಮೇಲೊಂದು
ವಾರಸುದಾರರಿರದ ಡಬ್ಬಿ
ಎಲ್ಲಿಂದ ಬಂದೆ ಹಕ್ಕಿ?
ಏಳು ಸಮುದ್ರಗಳ ಉಪ್ಪುಪ್ಪು ನೀರ
ದಾಟುವ ಚಟವಾದರೂ ಯಾಕೋ?

ಹಿಂದೊಮ್ಮೆ
ಗೋವೆಯ ಕಡಲ ತಡಿಯ ಮೇಲೆ
ದಟ್ಟ ಬೇಸಿಗೆಯ ನಡುವೆ
ಕವಿದ ಕಪ್ಪು ಮುಗಿಲು
“ಮಳೆಯಾದೀತು ಕೂಸೆ” ಅಂದಿತು ಕಡಲು

ಕಿತ್ತಲೆ ಸಂಜೆಗಳಲ್ಲಿ
ಕಡಲಿಗೆ ಹರಟೆಯ ಹುಕ್ಕಿ
ಯುಗದ ಮರಳ ಮೇಲೆ ಅನಂತ ರಂಗೋಲಿ
ಕಪ್ಪು ಟೋಪಿ ಗನ್ನಿನ ಪತ್ತೆದಾರರು
ಕತೆಗಳೆಲ್ಲಾ ಸುಳ್ಳೇ ಸುಳ್ಳು

ಕೆನೆವ ಕಡಲು ಚಿಕ್ಕಿಗಳ ಆಯುತ್ತಿದೆ
ಹೇಳಬೇಕಾದ್ದೇನಿಲ್ಲ
ಮೇಲೆ ತಿಳಿ ಮುಗಿಲು
ಜೇಬಲ್ಲಿ ಎರಡು ಕಪ್ಪೆಚಿಪ್ಪು
ಕದ್ದು ಹೊರಟಿದ್ದೇನೆ
ಕೊಡವುತ್ತಾ ಹಿಮ್ಮಡಿಯ ಮರಳು

ಆಕಾಶವಾಣಿ ಭದ್ರಾವತಿಯ ತುಂಬ
ಪುಟಾಣಿ ಮನುಶ್ಯರು
ವಾರ್ತೆಗಳ ಓದಿ ಗುಡುಗು ಸಹಿತದ
ಸಾಧಾರಣ ಜೋರು ಮಳೆಗಳ
ಸುರಿಸಿ ನೆನೆದು
ಸ್ಕೂಲು ಮುಗಿದ ಮೇಲೆ
ಕುಂಟಾಪಿಲ್ಲೆಯಾಡುತ್ತಿದ್ದರು

ಮೈದಾನದ ಮೆದುನೆಲದ ಮೇಲೆ
ಮಳೆಗಾಲದ ಮಾಮೂಲು ಮಳೆ
ತನ್ನಿಂತಾನೆ ಹುಟ್ಟಿಬಿಡುವ
ಕವಿತೆ ಸಾಲ ಹಾಗೆ ಹಸಿರು ಪಾಚಿ
ನಡೆದ ಹಾಗೆಲ್ಲಾ ಪಡೆವ
ಕಾವ್ಯಾನುಭೂತಿ

ಫಿಲಿಪ್ಸಿನ ಕರಿ ಪ್ಲಾಸ್ಟಿಕ್ಕುಗಳ
ಒಡೆದು
ಬಂದಾರೆಂದು ಕಾದೆ ಒಂದಿಶ್ಟು ವರ್ಷ

ನೀಲಿ ವ್ಯಾನಿಂದಿಳಿದು
ಎದೆ ತುಂಬ ಕಾಗುಣಿತ
ಗೀಚಿದವಳು
ದೀರ್ಘ ಕೊಂಬುಗಳ ಎಸೆದು
ನಕ್ಕು ಪುಷ್ಪಕ ವಿಮಾನವೇರಿ
ಹೊರಟುಬಿಟ್ಟಳು

ರೇಡಿಯೋ ಅಲ್ಲೆಲ್ಲೋ
ನಿತ್ರಾಣ ಮಲಗಿದೆ
ಕವಿತೆ ಮಾತ್ರ ಕಾಯುತ್ತಿದೆ

ಎಲ್ಲಾ ಅಂದುಕೊಂಡಂತೆಯೇ…
ಡಿಸೆಂಬರಿನಲ್ಲಿ ಅದೇ ಚಳಿ
ನಿನಗೆಂದು ಬರೆದ ಕವಿತೆಗಳಿಗೆ
ಬೆಂಕಿ ಹಚ್ಚುವುದಿಲ್ಲ
ಜಾರಿ ಬರುವ
ನೆನಪುಗಳ ನೆನೆಯದಿರೋ ಯತ್ನ
ಜಾರಿಯಲ್ಲಿದೆ ಅಷ್ಟೆ

ರಸ್ತೆ ಬದಿ ಮರಗಳ ಸಾಲು
ಹಳದಿ ಎಲೆ ಹಾಸಿಗೆ
ಮಬ್ಬು ಕಣ್ಣಲ್ಲಿ
ಸುಳಿವ ಹಳೆಯದೊಂದು ಬಿಂಬ
ಜುಮುರು ಮಳೆಗೆ
ಸುರಿವ ಕಾರಣಗಳೇ ಇರದಾಗ
ಬದುಕಿಬಿಡಲು ಇರಲಿ
ಹಾದಿಯುದ್ದ
ನೆವಗಳ ಕಾರ್ತಿಕ ದೀಪ

ಕಾಗದದ ದೋಣಿ
ಕರಗುವರೆಗಷ್ಟೇ ಪಯಣ
ಸದ್ದಿರದೆ ಮುತ್ತಿಕ್ಕುವ ಗಾಳಿ
ನೀರಲೊಂದು ತಣ್ಣನೆ ಪುಳಕ
ಅಲೆಗಳೆಡೆ ಮೆಲ್ಲುತ್ತಾ
ಪಾನ್ ಫ್ಲೇವರಿನ ಚಾಕಲೇಟು
ಮೆಲ್ಲ ತೇಲಿಬಿಡುವ
ಯಾತರ ಅವಸರ?
ತಲುಪಲು ಗುರಿಯಿರದಾಗ
ಯಾವುದಾದರೇನು ದಡ?

ನವೆಂಬರಿನ ಒಂದು ರಾತ್ರಿ

Posted: ಅಕ್ಟೋಬರ್ 23, 2013 by sukhesh in ನನ್ನ ಕತೆಗಳು
ಟ್ಯಾಗ್ ಗಳು:

“ಅಪ್ಪ ಕತೆ ಅಂದ್ರೇನು ನೀತಿಕತೆ ಅಂದ್ರೇನು?”
“ಕತೆ ಅಂದ್ರೆ ನಿಜ ಅಂತ್ಲೇ ಪುಟ್ಟ. ನೀತಿ ಕತೆ ಅಂದ್ರೆ ಒಂತರಾ ಸುಳ್ಳು ಅಂತ.”

****

ಆ ಬಸ್ಸು ನನ್ನನ್ನ ಆ ಊರಿಗೆ ತಂದು ಇಳಿಸಿದಾಗ ಸೂರ್ಯ ಘಟ್ಟಗಳ ಕೆಳಗೆ ಮರೆಯಾಗಿ ಎರಡು ಕ್ಷಣಗಳು ಕಳೆದಾಗಿತ್ತು. ಸಂಜೆಗತ್ತಲು ಮೆಲ್ಲ ಹರಡುತ್ತಾ ಇತ್ತು. ಜೊತೆಗೆ ಜಗದ ದು:ಖವ ಸುಂದರವಾಗಿ ತೋರಿಸುವಂತೆ ನವೆಂಬರ್ ಮಳೆ ಜಿನುಗುತ್ತಿತ್ತು. “ನೀ ಬರುವಷ್ಟು ಹೊತ್ತಿಗೆ ನಾ ಬಸ್ ಸ್ಟಾಂಡಲ್ಲಿದ್ರೆ ಆಯ್ತಲ್ಲ?” ಅಂತ ಮಾತು ಕೊಟ್ಟಿದ್ದ ಮಾವ ಸುತ್ತೆಲ್ಲೂ ಕಾಣದ್ದರಿಂದ ಅಂವ ಎಷ್ಟು ಹೊತ್ತಿಗೆ ಬರುತ್ತಾನೋ ಅಂತ ಚಿಂತಿಸುತ್ತಲೇ ಮೂರು ಜೊತೆ ಬಟ್ಟೆ, ನಾಲ್ಕು ಪುಸ್ತಕ ತುಂಬಿದ್ದ ಬ್ಯಾಗನ್ನು ಹೆಗಲಿಗೇರಿಸಿ ರಸ್ತೆಬದಿಯ ಚಾದಂಗಡಿ ಎಂಬ ಸೋಗೆ ಗುಡಿಸಲು ಸೇರಿಕೊಂಡೆ.

ಅಂಗಡಿ ಒಳಗೆ ಯಾರೂ ಇದ್ದಂತೆ ಕಾಣಲಿಲ್ಲ. ಒಮ್ಮೆ ಕೆಮ್ಮಿ ಮತ್ತೊಮ್ಮೆ “ಹಲೋ” ಅಂತ ಕೂಗಿದರೂ ಯಾರೂ ಓಗೊಡದೆ ಹೋದ್ದರಿಂದ ಅಲ್ಲೇ ಗಿರಾಕಿಗಳಿಗಾಗಿ ಇಟ್ಟಿದ್ದ ಬೆಂಚಿನ ಮೇಲೆ ಕೂತು ಗೋಡೆಗೊರಗಿದೆ. ಎದುರಿಗೆ ಮಡಿಕೆ ಮದಿಕೆಯಾಗಿ ಚದುರಿ ಹೋಗಿದ್ದ ಹಸಿರು ಕಾಡು. ಆವರಿಸುತ್ತಿದ್ದ ಕತ್ತಲೆಗೆ ಮರ ಗಿಡ ಹುಲ್ಲು ಹುಲಿ ಚಿರತೆಗಳೆಲ್ಲ ಮೆಲ್ಲಗೆ ಒಂದೇ ಮುದ್ದೆಯಾಗುತ್ತಾ ಸುರಿವ ಮಳೆಗೆ ಕರಗಿ ಹೋಗುತ್ತಾವೇನೋ ಅಂತ ಅನ್ನಿಸಿತು. ಆ ಊರಲ್ಲಿ ಅತ್ತೆಯ ದೊಡ್ಡಪ್ಪನ ಸೊಸೆಯ ಅಣ್ಣನ ಮನೆಗೋ ಇನ್ನೆಲ್ಲಿಗೋ ಒಮ್ಮೆ ಹುಲಿ ಬಂದಿತ್ತೆಂದು ಅಮ್ಮ ಹೇಳಿದ ಕತೆ ನೆನಪಾಗಿ ಒಂಚೂರು ನಡುಗಿದೆ. ಕೂತಿದ್ದ ಬೆಂಚಿನ ಮೇಲೆ ಸೀಮೆಸುಣ್ಣದಲ್ಲಿ ಏನೇನೋ ಗೆರೆ ಕೊರೆದಂತಿತ್ತು. ಸೂಕ್ಷ್ಮವಾಗಿ ನೋಡಿದರೆ ಚೌಕಾಬಾರದ ಮನೆಗಳು ಸ್ಪಷ್ಟವಾದವು. ಬಸ್ಸಿನ ನಾಕಿಂಚು ಜಾಗದಲ್ಲಿ ಮಡಚಿಟ್ಟ ಕಾಲುಗಳು ಚಾದಂಗಡಿಯ ವೈಶಾಲ್ಯಕ್ಕೆ ಮೈ ಬಿಚ್ಚುತ್ತಿದ್ದಂತೆ ಹಾಗೇ ಕಣ್ಮುಚ್ಚಿದೆ.

ಯಾರೋ ಹಿಡಿದು ತಳ್ಳಿದಂತಾಗಿ ಧಡಕ್ಕನೆ ಎದ್ದರೆ “ಕಂಡ್ ಕಂಡ್ ಕಡಿ ಎಲ್ಲ ಮಲ್ಕತ್ತಿಯಲ್ಲ ಮಾರಾಯ ನೀನು. ಏಳು ಏಳು” ಅಂತ ಮಾವ ಗದರುತ್ತಿದ್ದ. ಮಬ್ಬುಗತ್ತಲಲ್ಲಿ ಕೈ ಗಡಿಯಾರ ಎಂಟರ ಗಡಿ ದಾಟಿ ಮುಂದೆ ಹೋದ ಹಾಗೆ ಕಾಣಿಸಿತು. “ಅಲ್ಲ ಮಾವ. ನೀ ಬರೋ ಅಷ್ಟು ಹೊತ್ತಿಗೆ ಜೀಪು ಸ್ಟಾರ್ಟು ಮಾಡಿ ಕಾದಿರ್ತೀನಿ ಅನ್ದಿದ್ಯಲ್ಲ. ನಾ ಇಲ್ಲಿ ಕೂತು ಆಗ್ಲೇ ಮೂರು ಗಂಟೆ ಮೇಲಾಯ್ತು”. “ಕೂತಿದ್ದವ್ರು ಯಾರು ಮಾರಾಯ. ಆರಾಮ ಮಲ್ಗಿದ್ದೆ ತಾನೇ? ಮದ್ವೆಮನೆ ಅಂದ್ರೆ ಸಾವ್ರ ಕೆಲಸ ಇರುತ್ತೆ. ನೀ ಏನೋ ಬೆಂಗ್ಳೂರಲ್ಲಿ ರಿಜಿಸ್ಟ್ರು ಮಾಡ್ಕೊಂಡೆ ಅಂದ್ರೆ ಎಲ್ರ್ ಮದ್ವೆನೂ ಹಂಗೇ ಮಾದಕಾಗತ್ತ? ಬೇಗ ಜೀಪು ಹತ್ತು” ಅಂತ ಮಾವ ಗಡಿಬಿಡಿ ಮಾಡಿದ. ಜೀಪು ಮಾವನ ಹಸಿರು ಬಣ್ಣದ ಹೊಳೆಯುವ ಜೀಪಲ್ಲ ಅಂತ ಹೆಡ್ ಲೈಟ್ ಬೆಳಕಲ್ಲೇ ಗೊತ್ತಾಯ್ತು. “ಯಾಕೋ ಮಾವ? ಬೇರೆ ಯಾರ್ದೋ ಜೀಪು ತಂದಿದೀಯ?” ಅಂದೆ. ದೊಡ್ಡ ಶಬ್ದದ ಜೊತೆ ಜೀಪು ಸ್ಟಾರ್ಟ್ ಮಾಡಿದ ಮಾವ ಗೇರ್ ಲಿವರಿನ ಪಕ್ಕದ ಇನ್ನೊಂದು ಲಿವರು ತೋರಿಸಿ “ಈ ಗುಡ್ಡ ಹತ್ತೋಕೆ ನನ್ನ ಜೀಪಿಗೆ ಆಗಲ್ಲ ಕಣಪ್ಪ. ಇಲ್ಲಿಗೆ ಎಕ್ಸ್ಟ್ರಾ ಗೇರು ಎಕ್ಸ್ಟ್ರಾ ಬ್ರೇಕು ಮಿಲಿಟರಿ ಜೀಪಿನ ತರ ಗಾಡಿಗಳೇ ಬೇಕು. ನೀ ಈ ಊರಿಗೆ ಇಲ್ಲೀ ತಂಕ ಬಂದಿಲ್ಲ. ನೀನೇನು ನಿಮ್ಮ ಮನೆಯಿಂದ್ಲೇ ಯಾರೂ ಬಂದಿಲ್ಲ. ಸಣ್ಣ ಪುಟ್ಟ ವಿಷ್ಯಾನೆ ದೊಡ್ಡ ಮಾಡೋದು ಅಂದ್ರೆ ನಿಪ್ಪಂಗೆ ಅದೇನು ಕುಶೀನೋ ಗೊತ್ತಿಲ್ಲ. ಇಲ್ಲಾಂದ್ರೆ ಒಂದು ಜಗಳಾನ ಇಪ್ಪತ್ತೈದು ವರ್ಷ ಯಾರಾದ್ರು ನೆನಪಲ್ಲಿ ಇಟ್ಕೊತಾರ ?” ಅಂತ ಹಳೇ ಪುರಾಣದ ಮುಚ್ಚಳ ತೆಗೆದ. ನನಗೆ ಆ ಮಾತು ಬೇಡವಾಗಿತ್ತು. “ಮಾವ ರೋಡು ತುಂಬಾ ಕೆಸರಾಗಿದೆ. ಟೈರು ಜಾರುತ್ತೇನೋ” ಅಂದೆ. ಮಾವ ನಕ್ಕು “ಈ ಊರಲ್ಲಿ ಎಲ್ಲಾ ಜಾರೊದೆ. ಇನ್ನೂ ನೀ ದೊಡ್ಡಮ್ಮನ ಮನೆ ನೋಡಿಲ್ಲ. ಅವ್ರ್ ಮನೆ ಬಾಗ್ಲಿಗೆ ಹೋಗೋಷ್ಟು ಹೊತ್ತಿಗೆ ಏನೇನು ಜಾರುತ್ತೆ ಅಂತ ಗೊತ್ತಾಗುತ್ತೆ ತಡಿ” ಅಂದ. ನನಗೆ ಯಾವುದೋ ಒಂದು ಸಂಬಂಧದ ನಂಟು ಹಿಡಿದು ಹೋದರೆ ಅಜ್ಜಿ ಆಗುವ ವ್ರದ್ಧೆಯ ಬಗ್ಗೆಯೂ ಅದಕ್ಕೂ ಹೆಚ್ಚಾಗಿ ಆ ವ್ರದ್ಧೆಯ ತಲೆ ತಿರುಕ ಪತಿ ಅರ್ಥಾತ್ ನನ್ನ ಅಜ್ಜನ ಬಗ್ಗೆಯೂ ಅದಕ್ಕೂ ಹೆಚ್ಚಾಗಿ ಆ ತಲೆ ತಿರುಕ ಅಜ್ಜನ ಮನೆಯ ಬಗ್ಗೆಯೂ ಬಹಳವಾಗಿ ಕೇಳಿದ್ದೆ. ಒಮ್ಮೆಯೂ ನೋಡಿರದಿದ್ದರೂ ಸಾವಿರ ಬಾರಿ ಕೇಳಿದ ಆ ಮನೆ ಮತ್ತು ಆ ಮನೆಯ ಜನರ ಕತೆಯನ್ನು ಮಾವ ಮತ್ತೆ ಶುರು ಮಾಡಿದ. ನಾನು ನಿದ್ರೆಯ ನೆವ ಹೇಳಿ ಕಣ್ಣು ಮುಚ್ಚಿದೆ.

ಜೀಪು ಯಾವುದೋ ಗುಂಡಿಗೆ ಇಳಿದು ಎದ್ದಿತೇನೋ. ತಟ್ಟನೆ ಎಚ್ಚರವಾಯ್ತು. ಕಣ್ಣುಜ್ಜಿಕೊಂಡು ನೋಡಿದರೂ ಸುತ್ತಾ ಕತ್ತಲು. ಸದ್ದನ್ನೂ ಸಹಾ ಬಡಿದು ಬಾಯಿಗೆ ಹಾಕಿಕೊಂಡಂತ ಕತ್ತಲು. ಕತ್ತಲೆಗೆ ಹೆದರಬೇಕೋ ಮೌನಕ್ಕೆ ಹೆದರಬೇಕೋ ಒಂದು ಕ್ಷಣ ತಿಳಿಯಲಿಲ್ಲ. ಮಾವ ಮಾತನಾಡದೆ ರಟ್ಟೆ ಹಿಡಿದು ಎಳೆದುಕೊಂಡು ಹೋಗುವವನಂತೆ ಮುಂದೆ ನಡೆದ. ಕಾಡ ನಡುವೆ ಸ್ವಲ್ಪ ದೂರ ನಡೆದ ಮೇಲೆ ಚೂರು ಬೆಳಕಾದಂತೆ ಅನ್ನಿಸಿತು. ಬಹುಷಃ ಗದ್ದೆ ಇರಬೇಕು. ಅಂಚಿನ ಮೇಲೆ ನಡೆವಾಗ ಸೋನೆ ಮಳೆಗೆ ನೆಂದ ಹುಲ್ಲಿನ ಗರಿಗಳು ಪಾದವನ್ನ ಮೃದುವಾಗಿ ಸವರುತ್ತಿರುವಂತೆ ಭಾಸವಾಗುತ್ತಿತ್ತು. ಭಯವೋ ಖುಷಿಯೋ ಕನಸೋ ನನಸೋ ತಿಳಿಯದೆ ಸುಮ್ಮನೆ ನಡೆಯುತ್ತಾ ಇದ್ದೆ.

ಒಂದೆರಡು ತಾಸೋ ಅಥವಾ ಒಂದೆರಡು ನಿಮಿಷವೋ ನಡೆದಿರಬೇಕು. ಮನೆ ಬಂತು ಎಂಬಂತೆ ಮಾವ ನಿಂತ. ನಾನೂ ನಿಂತೆ. ಮಾವ ಆಕಾಶಕ್ಕೆ ಕೈ ತೋರಿದ. ಕವಿದ ಮೋಡಗಳ ನಡುವೆ ಒಂದು ಸಕ್ಷತ್ರವೂ ಇರಲಿಲ್ಲ. ಆದರೆ ಕಪ್ಪು ಮೋಡಗಳಲ್ಲೇ ಕೆಲವೊಂದು ಹೆಚ್ಚು ಗಾಢವಾಗಿಯೂ ಕೆಲವೊಂದು ಇನ್ನೂ ಹೆಚ್ಚು ಗಾಢವಾಗಿಯೂ ಮತ್ತೊಂದು ಮತ್ತೂ ಗಾಢವಾಗಿಯೂ ಕಂಡಿತು. ಇಷ್ಟು ದಟ್ಟ ಮೋಡಗಳು ಕವಿದರೂ ಮಳೆ ಮಾತ್ರ ಬರಿದೆ ಜಿನುಗುತ್ತಿದೆಯಲ್ಲಾ ಅಂತ ಆಶ್ಚರ್ಯವಾಯ್ತು.

“ಇಲ್ಲೇ ಮೇಲೆ ಹತ್ಬೇಕು ನೋಡು. ಜಾರೋದು ಅಂದ್ರೆ ಏನು ಅಂತ ಇಲ್ಲಿ ಗೊತ್ತಾಗುತ್ತೆ”. ಮಾವ ಗಂಭೀರವಾಗಿದ್ದಂತೆ ಕಂಡಿತು. ಕತ್ತಲೆಯಲ್ಲೇ ಕಣ್ಣರಳಿಸಿ ನೋಡಿದೆ. ಮೆಲ್ಲಗೆ ನಾಗಲೋಕಕ್ಕೆ ಇಳಿವ ಮೆಟ್ಟಿಲುಗಳ ಹಾಗೆ ಗುಡ್ಡದ ಕಲ್ಲಲ್ಲಿ ಕೆತ್ತಿದ ಮೆಟ್ಟಿಲುಗಳು ಕಂಡವು.

ಅದೊಂದು ಪುಟ್ಟ ಗುಡ್ಡದ ಮೇಲಿನ ಮನೆ. ಇನ್ನೂ ಸರಿಯಾಗಿ ಹೇಳಬೇಕಾದರೆ ಆ ಮನೆ ಕಟ್ಟಲಿ ಎಂದೇ ಆ ಗುಡ್ಡ ಭೂಮಿಯ ಅಂತರಾಳದಲ್ಲೆಲ್ಲಿಂದಲೋ ಮೇಲೆ ಎದ್ದಂತಿತ್ತು. ಭೂಶಾಸ್ತ್ರವನ್ನೇನು ನಾ ಓದಿಲ್ಲದಿದ್ದರೂ ಆ ಗುಡ್ಡದ ಮಣ್ಣು ಈ ನೆಲದ್ದಲ್ಲವೇ ಅಲ್ಲ ಅಂತ ಅನ್ನಿಸಿತು. ನಾ ಕೇಳಿದ ಕತೆಗಳ ಪ್ರಕಾರ ಈ ಗುಡ್ಡದಿಂದ ಅರ್ಧ ಮೈಲು ದೂರದಲ್ಲೆಲ್ಲೋ ಇನ್ನೊಂದು ಇಷ್ಟೇ ಎತ್ತರದ ಗುದ್ದವಿದೆ. ಎರಡು ಗುಡ್ಡಗಳ ನಡುವೆ ಸಣ್ಣಕ್ಕೆ ಹರಿವ ತೊರೆಗೆ ಸೀತಾ ನದಿ ಅನ್ನೋ ದೊಡ್ಡ ಹೆಸರಿದೆ. ಈ ಎರಡು ಗುಡ್ಡಗಳ ನಡುವೆ ಅಜ್ಜನ ಅಡಿಕೆ ತೋಟ ಮಲಗಿದೆ. ಈ ಗುಡ್ಡದ ಮೇಲೆ ಅಂಗೈ ಅಗಲದಷ್ಟೇ ಜಾಗವಿದ್ದರೂ ಮತ್ತು ಆ ಜಾಗದಷ್ಟಕ್ಕೂ ಆ ಮನೆಯೇ ಹರಡಿದ್ದರೂ ಸಹ ಅದೆಲ್ಲಿಂದಲೋ ಒಂದು ಸಣ್ಣ ತೊರೆ ಹುಟ್ಟಿ ಗುಡ್ಡದಂಚಲ್ಲೇ ಹರಿಯುತ್ತಾ ಅಲ್ಲಲ್ಲಿ ಜಲಪಾತದ ಭ್ರಮೆ ಹುಟ್ಟಿಸುತ್ತಾ ಮೆಲ್ಲಗೆ ಹರಿದು ಸೀತಾನದಿ ಸೇರುತ್ತದೆ.

ಸಂಜೆಯಿಂದ ಜಿನುಗಿದ ಮಳೆಗೋ ಏನೋ ಮೆಟ್ಟಿಲುಗಳು ಜಾರುತ್ತಿದ್ದವು. ಮನೆಗೆ ಅಂತ ಬಂದವರು ಸೀದಾ ಸ್ವರ್ಗ ಸೇರದಿರಲಿ ಅಂತ ಅಜ್ಜ ಮೆಟ್ಟಿಲುಗಳ ಒಂದು ಕಡೆಗೆ ಕಟ್ಟಿಸಿದ್ದ ಕಬ್ಬಿಣದ ತಡೆಗೋಡೆಯಂತಾ  ಬೇಲಿ ಇರದಿದ್ದರೆ ಈ ಜಾರಿಕೆಯ ಮೆಟ್ಟಿಲುಗಳನ್ನು ಏರುವುದು ಬಹುಷಃ ಸಾಧ್ಯವೇ ಇರಲಿಲ್ಲವೇನೋ. ಹಾಗೂ ಹೀಗೂ ಜಾರುತ್ತಾ ಏರುತ್ತಾ ಮಾವನ “ನಿಧಾನ ಮಾಣಿ.”, “ಹುಷಾರು. ಜಾರುತ್ತೆ” ಇತ್ಯಾದಿ ಮಾತುಗಳ ಮಧ್ಯೆ ಒಂದರ್ಧ ಗಂಟೆ ಹತ್ತಿರ ಬಹುದೇನೋ ಮೆಟ್ಟಿಲುಗಳು ನಿಂತುಹೋದವು. ಆದರೆ ಅಂದುಕೊಂಡ ಹಾಗೆ ಸಪಾಟು ನೆಲ ಸಿಗಲಿಲ್ಲ. ಬದಲಾಗಿ ಗುಡ್ಡದ ಅಂಚಿಗೇನೆ ಸ್ವಲ್ಪವೂ ಜಾಗ ಬಿಡದೇ ಕಲ್ಲಿನಲ್ಲಿ ಕಟ್ಟಿದ್ದ ಪಾಚಿ ಕಟ್ಟಿದ ಗೋಡೆ, ಗೋಡೆಯನ್ನು ಅಪ್ಪಿ ಕುಳಿತಿದ್ದ ಕಬ್ಬಿಣದ ಏಣಿ ಮೇಲೆಲ್ಲೋ ಬೆಳಗುತ್ತಿದ್ದ ಪೆಟ್ರೋಮ್ಯಾಕ್ಷ್ ಬೆಳಕಲ್ಲಿ ಅಸ್ಪಷ್ಟವಾಗಿ ಕಂಡಿತು.

“ಎಲ್ಲಾದ್ರು ಬಾಗ್ಲೇ ಇಲ್ಲದ್ ಮನೆ ನೋಡಿದ್ಯಾ? ಇದ್ಕೇ ಎಲ್ಲಾ ನಿಮ್ಮಜನ್ನ ಹುಚ್ಚ ಅನ್ನೋದು. ಬಾ. ಮೊದ್ಲು ನೀನೇ ಮೇಲೆ ಹತ್ತು. ಆ ಏಣಿ ಪೂರ್ತಿ ಸರಿ ಇಲ್ಲ. ಜಾಸ್ತಿ ಭಾರ ಬಿಡ್ಬೇಡ. ಚೂರು ಗೋಡೆ ಸಪೋರ್ಟು ತಗೊಂಡು ನಿಧಾನ ಹತ್ತು.” ಅಂದ.

ಬಾಗಿಲೇ ಇಲ್ಲದ ಮನೆ ಅಂತ ಮೊದಲೇ ಗೊತ್ತಿತ್ತು. ಆದರೆ ಈ ರೀತಿ ಕಾಲು ಜಾರಿದರೆ ಕೈಲಾಸವೇ ಸರಿ ಅನ್ನುವಂತಾ ಜಾಗ ಅಂತ ಗೊತ್ತಿರಲಿಲ್ಲ. ತಣ್ಣನೆ ಬೀಸುತ್ತಿದ್ದ ಗಾಳಿ, ಹನಿಯುತ್ತಿದ್ದ ಮಳೆಯ ಮಧ್ಯೆ ಸಣ್ಣಗೆ ಮೈ ಬೆವರಿತು. ಆದರೆ ಬೇರೆ ದಾರಿಯೇ ಇಲ್ಲ. ಮಾವನ ಹೆಗಲಿನ ಆಸರೆಯಲ್ಲಿ ಬಾಗಿ ತಣ್ಣಗಿನ, ತುಕ್ಕು ಹಿಡಿದು ಮುಕ್ಕಾಗಿದ್ದ ಏಣಿಗೆ ಕೈ ಚಾಚಿದೆ. ಗೋಡೆಗೆ ಹೊಡೆದಿದ್ದ ಏಣಿಯ ಬಲ ತುದಿ ಸಡಿಲವಾಗಿತ್ತೋ ಏನೋ, ಹೆಜ್ಜೆ ಎತ್ತಿ ಇಡುವಾಗೆಲ್ಲಾ ಏಣಿ ಗೋಡೆಯಿಂದ ತುಸು ಹೊರಬಂದು ಜೀವ ಬಾಯಿಗೆ ತರಿಸುತ್ತಿತ್ತು. ಜೊತೆಗೆ ಜಿನುಗು ಮಳೆಯ ನೀರು ಬೇರೆ. ಏಣಿಯ ತುತ್ತ ತುದಿ ಸೇರುವಷ್ಟರಲ್ಲಿ ನನ್ನ ಭಾರಕ್ಕೆ ಏಣಿ ಇನ್ನೇನು ಗೋಡೆಯಿಂದ ಕಿತ್ತು ಬರುವಂತೆ ಹೊಯ್ದಾಡಿತು. ಗಾಬರಿಯಿಂದ ಬಲಗೈ ಬೀಸಿ ಗೋಡೆಯ ತುದಿ ಹಿಡಿದುಕೊಂಡೆ. ಎರಡು ನಿಮಿಷ ಸುಧಾರಿಸಿಕೊಂಡು ಆಮೇಲೆ ಮೆಲ್ಲಗೆ ಎರಡು ಕೈಗಳಲ್ಲೂ ತಾರಸಿಯ ಅಂಚು ಹಿಡಿದು ತೆವಳುವವನಂತೆ ಮನೆಯ ಮೇಲೆ ತಲುಪಿದೆ.

ನೆಟ್ಟಗೆ ನಿಂತ ಮನೆಯೊಂದನ್ನು ಕಿತ್ತು ಬೆನ್ನಿನ ಮೇಲೆ ಮಲಗಿಸಿದ ಹಾಗೆ ತಾರಸಿಯ ಮೇಲೆ ಒಂದು ಕಿಟಕಿ, ಕಿಟಕಿಯ ಪಕ್ಕ ಬಾಗಿಲು. ಮುಚ್ಚಿದ್ದ ಎರಡರ ಸೀಳುಗಳಿಂದಲೂ ಬೆಳಕಿನ ಒಂಟಿ ಕಿರಣಗಳು ಆಕಾಶಕ್ಕೆ ಚಿಮ್ಮುತ್ತಿದ್ದವು. ಒಳಗಿನಿಂದ ಮಾತು, ನಗು, ಯಾವುದೋ ಮಕ್ಕಳ ಅಳು ಜಗಳ, ಕರಿದ ತಿಂಡಿಯ ಘಮ ಇತ್ಯಾದಿ ಇತ್ಯಾದಿ ಸೋರಿ ತೊರೆಯಲ್ಲಿ ಕರಗಿ ಗುಡ್ಡದಂಚಲ್ಲಿ ಸಾಗಿ ಸೀತಾನದಿ ಸೇರುತ್ತಿದ್ದವು. ಬಾಗಿಲಲ್ಲದ ಬಾಗಿಲನ್ನು ತಟ್ಟಬೇಕೋ, ತಟ್ಟಬಹುದೋ ತಿಳಿಯದೇ ಕಿಂಕರ್ತವ್ಯ ಮೂಢನಂತೆ ಮಾವ ಬರುವುದನ್ನೇ ಕಾಯುತ್ತಾ ಕುಳಿತೆ.

(ಮುಂದುವರೆಯುವುದು)